ಸಂಘ, ಸಂಸ್ಥೆಗಳಿಗೇ ರಸ್ತೆಗಳ ಸ್ವಚ್ಛ, ಸಂಪೂರ್ಣ ನಿರ್ವಹಣೆ ಹೊಣೆ

Public TV
2 Min Read

– ಬಿಬಿಎಂಪಿಯ ‘ಅಡಾಪ್ಟ್-ಎ ಸ್ಟ್ರೀಟ್’ ಯೋಜನೆ ಮೂಲಕ ಹೊಣೆ

ಬೆಂಗಳೂರು: ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ `ಅಡಾಪ್ಟ್-ಎ ಸ್ಟ್ರೀಟ್’ ಹೆಸರಿನಲ್ಲಿ ರಸ್ತೆ ದತ್ತು ಪಡೆಯುವ ಯೋಜನೆಗೆ ಬಿಬಿಎಂಪಿ ಚಾಲನೆ ನೀಡಿದೆ.

ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಂದು ವಿಶೇಷ ಆಯುಕ್ತ ರಂದೀಪ್ ನೇತೃತ್ವದಲ್ಲಿ ವಿವಿಧ 25 ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜೊತೆ 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯುವ ಕುರಿತು ಸಭೆ ನಡೆಯಿತು.

ಬೆಂಗಳೂರನ್ನು ಸ್ವಚ್ಛ, ಸುಂದರ ನಗರವನ್ನಾಗಿಸುವ ಉದ್ದೇಶದಿಂದ ರಸ್ತೆ ದತ್ತು ಪಡೆಯುವ ಯೋಜನೆಗೆ ಪಾಲಿಕೆ ಚಾಲನೆ ನೀಡಿದ್ದು, ಈಗಾಗಲೇ ಇಂಡಿಯಾ ರೈಸಿಂಗ್ ಟ್ರಸ್ಟ್ 10 ರಸ್ತೆಗಳನ್ನು ದತ್ತು ಪಡೆದು ಆ ರಸ್ತೆಗಳನ್ನು ಸ್ವಚ್ಛವಾಗಿಡುವ ಕಾರ್ಯ ನಡೆಯುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿನ ಯಾವುದೇ ರಸ್ತೆಯನ್ನಾಗಲಿ `ಅಡಾಪ್ಟ್ ಎ ಸ್ಟ್ರೀಟ್’ ಹೆಸರಿನಲ್ಲಿ ದತ್ತು ಪಡೆಯಬಹುದಾಗಿದೆ. ದತ್ತು ಪಡೆದ ಸಂಸ್ಥೆ ಆ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ) ತೆರವುಗೊಳಿಸುವುದು, ಪೌರಕಾರ್ಮಿಕರ ಸಹಯೋಗದಲ್ಲಿ ಬ್ಲಾಕ್ ಸ್ಪಾಟ್ ಸ್ಥಳದಲ್ಲಿ ರಂಗೋಲಿ ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಗೋಡೆ, ಮರಕ್ಕೆ ಅಂಟಿಸಿರುವ ಬಿತ್ತಿಪತ್ರಗಳನ್ನು ತೆರವುಗೊಳಿಸುವುದು, ಗೋಡೆಗಳ ಮೇಲೆ ಬಣ್ಣ ಬಳಿಯುವುದು, ಪಾದಚಾರಿ ಮಾರ್ಗ ಸರಿಪಡಿಸುವುದು, ಒಣ ಮರ ಅಥವಾ ಮರಕ್ಕೆ ಅಳವಡಿಸಿರುವ ಗ್ರಿಲ್ ತೆರವುಗೊಳಿಸಬೇಕು. ಬೀದಿ ದೀಪ ನಿರ್ವಹಣೆಯ ಮೇಲೆ ಉಸ್ತುವಾರಿ ವಹಿಸುವುದು, ರಸ್ತೆ ಮದ್ಯೆಯ ಮೀಡಿಯನ್ಸ್ ನಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡುವುದು, ಉದ್ಯಾನ ಸ್ವಚ್ಛಗೊಳಿಸುವುದು, ರಸ್ತೆಯಲ್ಲಿ ಬ್ಯಾನರ್, ಫ್ಲೆಕ್ಸ್, ಒಎಫ್‍ಸಿ ಕೇಬಲ್, ಬೀದಿ ದೀಪ, ರಸ್ತೆ ಗುಂಡಿ ಕಂಡು ಬಂದರೆ `ಸಹಾಯ’ ಅಪ್ಲಿಕೇಷನ್ ಅಥವಾ `ಪಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಷನ್‍ನಲ್ಲಿ ದೂರು ದಾಖಲಿಸುವುದು ಸೇರಿದಂತೆ ಒಟ್ಟಾರೆ ರಸ್ತೆಯನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಯೋಜನೆಯಡಿ ಪಾಲಿಕೆ ಯಾವುದೇ ರೀತಿ ಅನುದಾನ ನೀಡುವುದಿಲ್ಲ.

ಒಮ್ಮೆ ರಸ್ತೆ ದತ್ತು ಪಡೆದರೆ ಅದರ ಸ್ವಚ್ಛತಾ ಜವಾಬ್ದಾರಿ ಆ ಸಂಸ್ಥೆಯದ್ದೇ ಆಗಿರುತ್ತದೆ. ಒಂದು ತಿಂಗಳಿಗೊಮ್ಮೆಯಾದರೂ ರಸ್ತೆಯನ್ನು ಸ್ವಚ್ಛ ಮಾಡುತ್ತಿರಬೇಕು. ದತ್ತು ಪಡೆದ ಸಂಘ-ಸಂಸ್ಥೆ ಹಾಗೂ ರಸ್ತೆಯ ಹೆಸರಿರುವ ನಾಮಫಲಕವನ್ನು ಪಾಲಿಕೆ ವತಿಯಿಂದ ಅಳವಡಿಸಲಾಗವುದು. ಸಂಸ್ಥೆಯ ಕುರಿತ ಜಾಹೀರಾತು ಅಳವಡಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ರಸ್ತೆಯ ನಿರ್ವಹಣೆ ಮಾಡುವುದರಲ್ಲಿ ಸಂಸ್ಥೆ ವಿಫಲವಾದಲ್ಲಿ ದತ್ತು ನೀಡಿರುವ ರಸ್ತೆಯನ್ನು ಪಾಲಿಕೆ ಹಿಂಪಡೆಯಲಿದೆ.

ಈಗಾಗಲೇ ಕೆಲವು ಸಂಸ್ಥೆಗಳು ಪ್ರಾಯೋಗಿಕವಾಗಿ ಕೋರಮಂಗಲ, ಜೆ.ಪಿ.ನಗರ, ಸದಾಶಿವನಗರ ಸೇರಿದಂತೆ ಕೆಲವು ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದೀಗ ಅಭ್ಯೂದಯ, ಡೆಲ್, ಸಿಡಬ್ಲೂಎ, ಸಿ.ಜಿ.ಐ ಇಂಡಿಯಾ, ಎಸ್.ಡಬ್ಲೂ.ಎ.ಆರ್, ಸೇವ್ ಗ್ರೀನ್, ಒನ್ ಡ್ರೀಮ್ ಪೌಂಡೇಷನ್, ವಿಪರ್ವ ಸೇರಿದಂತೆ 25 ಸಂಸ್ಥೆಗಳು 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯಲು ಆಸಕ್ತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.

ಬಿಬಿಎಂಪಿ ವೆಬ್‍ಸೈಟ್‍ನಲ್ಲಿ `ಅಡಾಪ್ಟ್ ಎ ಸ್ಟ್ರೀಟ್’ಗೆ ಸಂಬಂಧಿಸಿದಂತೆ ಅರ್ಜಿ ಸಿದ್ಧಪಡಿಸಲಾಗಿದ್ದು, ಆಸಕ್ತರು ಅರ್ಜಿ ಭರ್ತಿ ಮಾಡಿ adoptastreetbbmpgmail.com ಗೆ ಕಳುಹಿಸುವ ಅವಕಾಶ ಪಾಲಿಕೆ ಕಲ್ಪಿಸಿದೆ. ದತ್ತು ನೀಡುವ ಮುನ್ನ ಸಂಘ-ಸಂಸ್ಥೆಗೆ ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಆ ಬಳಿಕ ಪಾಲಿಕೆ ಜೊತೆ ಒಡಂಬಡಿಕೆ ಮಾಡಿಕೊಂಡು ದತ್ತು ನೀಡಲಾಗುತ್ತದೆ.

ಇಂಡಿಯಾ ರೈಸಿಂಗ್ ಟ್ರಸ್ಟ್ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕ್ಯಾಮೆಸೆರಿಯೆಟ್(ಮೇಯೋಹಾಲ್ ರಿಂದ ಗುರುಡಾಮಾಲ್ ರವರಿಗಿನ ರಸ್ತೆ), ಮದ್ರಾಸ್ ರಸ್ತೆ ಒಟ್ಟು 10 ರಸ್ತೆಗಳನ್ನು ದತ್ತು ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *