ಚಿಕ್ಕಬಳ್ಳಾಪುರ: ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಸರಣಿ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆ ಬಳಿ ನಡೆದಿದೆ.
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ವಾಪಸಂದ್ರ ಸೇತುವೆ ಬಳಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಗುಂಡಿ ಬಿದ್ದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಾತ್ಕಾಲಿಕವಾಗಿ ತೇಪೆ ಹಾಕಲಾಗಿದೆ. ಆದರೆ ತೇಪೆ ಹಾಕಿರುವ ಜಾಗದಲ್ಲಿ ಮತ್ತೆ ಹಳ್ಳ ಬಿದ್ದಿದ್ದು, ಹೈವೇಯಲ್ಲಿ ಅತಿ ವೇಗವಾಗಿ ಬರುವ ವಾಹನಗಳು ಹಳ್ಳದಲ್ಲಿ ಬಿದ್ದು ಜಂಪ್ ಹೊಡೆಯುತ್ತಿದೆ. ಇಂದು ಸಹ ಸ್ಯಾಂಟ್ರೋ ಕಾರೊಂದು ಅತಿ ವೇಗವಾಗಿ ಬಂದಿದ್ದು, ಹಳ್ಳದಲ್ಲಿ ಇಳಿದ ಕೂಡಲೇ ಚಾಲಕನ ನಿಯಂತ್ರಣ ತಪ್ಪಿದ ಕಾರು ಎದರುಗಡೆ ಹೋಗುತ್ತಿದ್ದ ಆಟೋ ಹಾಗೂ ಟಾಟಾ ಏಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದೆ ಹಾಗಾಗಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್
ಆಟೋದಲ್ಲಿ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದರು ಅಟೋ ಜಖಂ ಆಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆಟೋ ಚಾಲಕ ಸಹಿತ 7 ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ