ಸಿಕ್ಸರ್, ಕ್ಯಾಚ್ ಆಯ್ತು ಈಗ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ!

Public TV
2 Min Read

ಸಿಡ್ನಿ: ವಿಕೆಟ್ ಕೀಪರ್ ಆಗಿರುವ 21 ವರ್ಷದ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾ ಪರ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ರಿಷಬ್ ಪಂತ್ ಅಜೇಯ 159 ರನ್(189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ತಾನು ಆಡುತ್ತಿರುವ 9ನೇ ಪಂದ್ಯದಲ್ಲಿ ರಿಷಬ್ ಪಂತ್ 85 ಎಸೆತದಲ್ಲಿ 50 ರನ್(4 ಬೌಂಡರಿ), 137 ಎಸೆತದಲ್ಲಿ 100 ರನ್(8 ಬೌಂಡರಿ), 185 ಎಸೆತದಲ್ಲಿ 150 ರನ್(14 ಬೌಂಡರಿ, 1 ಸಿಕ್ಸರ್) ಹೊಡೆದಿದ್ದಾರೆ.

ಮೊದಲ ದಿನ 90 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 303 ರನ್ ಗಳಿಸಿದ್ದ ಭಾರತ ಇಂದು 77.2 ಓವರ್ ಗಳಲ್ಲಿ 319 ರನ್ ಕಲೆಹಾಕಿತು. ಅಂತಿಮವಾಗಿ 167.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 622 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

418 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಆಗಮಿಸಿದ ರವೀಂದ್ರ ಜಡೇಜಾ ಮತ್ತು ರಿಷಬ್ ಪಂತ್ 7ನೇ ವಿಕೆಟ್‍ಗೆ 174 ರನ್ ಗಳ ಅಮೂಲ್ಯ ಜೊತೆಯಾಟವಾಡಿ ಭಾರತವನ್ನು 600 ರನ್ ಗಳ ಗಡಿ ದಾಟಿಸಿದರು. 81 ರನ್(114 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದ ಜಡೇಜಾ ಲಿಯಾನ್ ಗೆ ಬೌಲ್ಡ್ ಆಗುವುದರೊಂದಿಗೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಚೇತೇಶ್ವರ ಪೂಜಾರ 193 ರನ್(373 ಎಸೆತ, 22 ಬೌಂಡರಿ), ಹನುಮ ವಿಹಾರಿ 42 ರನ್(96 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಇದನ್ನು ಓದಿ : ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ 114 ರನ್ ಹೊಡೆದಿದ್ದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ನಾಟಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ರಿಷಭ್ ಪಂತ್, ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದ ಮೊದಲ ಭಾರತದ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ಎದುರಿಸಿದ 2ನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಬ್ ಪಂತ್ ಪಡೆದಿದ್ದರು. ಈ ಸಾಧನೆಯ ಮೂಲಕ ವಿಶ್ವ ಕ್ರಿಕೆಟ್ ಆಟಗಾರರ ಈ ಪಟ್ಟಿಯಲ್ಲಿ ರಿಷಬ್ 12ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದನ್ನು ಓದಿ : ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ರಿಷಭ್ ಪಂತ್ ದಾಖಲೆ

ಒಟ್ಟು 8 ಟೆಸ್ಟ್ ಪಂದ್ಯಗಳ 14 ಇನ್ನಿಂಗ್ಸ್ ಗಳಲ್ಲಿ ರಿಷಬ್ ಪಂತ್ 537 ರನ್ ಹೊಡೆದು, 40 ಕ್ಯಾಚ್, 2 ಸ್ಟಂಪ್ ಔಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *