ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

Public TV
1 Min Read

ಹಿರಿಯ ನಟ ಡಿಂಗ್ರಿ ನಾಗರಾಜ್ ಸುಪುತ್ರ ರಾಜವರ್ಧನ್ (Rajavardhan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹಿರಣ್ಯ’ (Hiranya) ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಜವರ್ಧನ್ ಗೆ ಜೋಡಿಯಾಗಿ ಯುವನಟಿ ರಿಹಾನಾ (Rihanna) ಬಣ್ಣ ಹಚ್ಚಿರುವ ಬಗ್ಗೆ ಮಾಹಿತಿಯಷ್ಟೇ ಬಿಟ್ಟುಕೊಟ್ಟಿದ್ದ ಸಿನಿಮಾ ತಂಡ ಇದೀಗ ನಾಯಕಿಯ ಪಾತ್ರ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

ರಿಹಾನಾ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಅನಾವರಣ ಮಾಡಿದೆ. ಏನನ್ನೋ ಕಳೆದುಕೊಂಡಂತೆ ಭಾವುಕಳಾಗಿ ನಿಂತಿರುವ ಅಭಿನಯ ಪಾತ್ರ ಸಿನಿಮಾಗೆ ತಿರುವು ನೀಡಲಿದೆಯಂತೆ. ಅಂದಹಾಗೇ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಿಹಾನಾ  ಅವರನ್ನು ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಲಾಗಿದೆ. ಹಿರಣ್ಯದಲ್ಲಿ ಇವರದ್ದು ಪವರ್ ಫುಲ್ ಪಾತ್ರ. ಸಿನಿಮಾ ಪೂರ್ತಿ ಅಭಿನಯ ಎಮೋಷನ್ ಕ್ಯಾರಿ ಮಾಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ಅವ್ಯಕ್ತ.

ಈಗಾಗಲೇ ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ಯಕ್ತ (Praveen Avyakta) ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ (Divya Suresh) ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 

ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.  ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Share This Article