ವಿಶ್ವ ಅಮ್ಮಂದಿರ ದಿನವೇ ತಾಯಿಯಾದ್ರು ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ

Public TV
1 Min Read

ಬೆಂಗಳೂರು: ವಿಶ್ವ ಅಮ್ಮಂದಿರ ದಿನವೇ ಉಕ್ಕಿನ ಮಹಿಳೆ ಖ್ಯಾತಿಯ ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ತಾಯಿಯಾಗಿದ್ದಾರೆ.

ನಗರದ ಮಲ್ಲೇಶ್ವರಂನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಇರೋಮ್ ಶರ್ಮಿಳಾ ಅವರು ಇಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.

Share This Article
Leave a Comment

Leave a Reply

Your email address will not be published. Required fields are marked *