ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ನಿರ್ಲಕ್ಷ್ಯ ಸಲ್ಲದು: ಮಾಹಿತಿ ಆಯುಕ್ತರಾದ ಡಾ.ಹರೀಶ್ ಕುಮಾರ್, ಕೆ.ಬದ್ರುದ್ದೀನ್

Public TV
3 Min Read

ಚಾಮರಾಜನಗರ: ಉನ್ನತ ಅಧಿಕಾರಸ್ಥರಿಂದ ಹಿಡಿದು ಗ್ರಾಮ ಪಂಚಾಯಿತಿ ವರೆಗಿನ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಮಾಹಿತಿ ಹಕ್ಕಿನಡಿ ಕೇಳಲಾಗುವ ಯಾವುದೇ ಅರ್ಜಿಯನ್ನು ನಿರ್ಲಕ್ಷ್ಯ ಮಾಡದೆ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರ ಹಾಗೂ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತನ್ನದೇ ಆದ ಕರ್ತವ್ಯಗಳನ್ನು ನಿರ್ವಹಿಸಲಿದೆ. ಕಾರ್ಯಕ್ರಮಗಳು, ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಾಶ್ವತ ಕಾರ್ಯಾಂಗವೆಂದರೆ ನೌಕರ ಶಾಹಿಗಳು. ಅಧಿಕಾರಿ ನೌಕರರಿಗೆ ಗುರುತರ ಜವಾಬ್ದಾರಿಯಿದೆ. ಜನರು ಮಾಹಿತಿ ಹಕ್ಕಿನಡಿ ಕೇಳುವ ಮಾಹಿತಿಯನ್ನು ಉದಾಸೀನ ಮಾಡದೇ ನೀಡಬೇಕು ಎಂದರು.

ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಉದ್ದೇಶದೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಸರಳ, ಸಂಕೀರ್ಣ, ಬಲಿಷ್ಠ ಮಾಹಿತಿ ಹಕ್ಕು ಕಾಯ್ದೆಯನ್ನು 2005ರಲ್ಲಿ ಜಾರಿಗೆ ತರಲಾಯಿತು. ವ್ಯವಸ್ಥೆಯ ಲೋಪದೋಷಗಳನ್ನು ಕೇಳುವ ಹಕ್ಕು ಪ್ರಜೆಗಳಿಗಿದೆ. ಸ್ವಾತಂತ್ರ್ಯದ ಹಕ್ಕಿನಷ್ಟೇ ಮಹತ್ವ ಮಾಹಿತಿ ಹಕ್ಕಿಗೂ ಇದೆ. ನೀತಿ ನಿರೂಪಣೆ ಅನುಷ್ಠಾನ ಮಾಡುವ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮಾಹಿತಿ ಹಕ್ಕಿನ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕಿನಡಿ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಅನಗತ್ಯ ಆತಂಕ ಬೇಡ. ಕಾಯ್ದೆ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿದುಕೊಂಡರೆ ಅರ್ಜಿಯಲ್ಲಿ ಕೋರುವ ಮಾಹಿತಿಯನ್ನು ಸಮರ್ಪಕವಾಗಿ ನೀಡಬಹುದು. ಮಾಹಿತಿ ಹಕ್ಕು ಅಧಿನಿಯಮದ ಅಧ್ಯಾಯಗಳು, ಕಲಂಗಳನ್ನು ಓದಿ ಮನನ ಮಾಡಿಕೊಂಡಿರಬೇಕು. ಮಾಹಿತಿ ಆಯೋಗ, ನ್ಯಾಯಾಲಯಗಳು ನೀಡಿರುವ ಆದೇಶ ತೀರ್ಪುಗಳ ಬಗ್ಗೆ ತಿಳಿದುಕೊಂಡಿರಬೇಕು. ಇದರಿಂದ ಮಾಹಿತಿ ದಾಖಲೆಗಳನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದರು.

ಮಾಹಿತಿ ಹಕ್ಕು ಕಾಯ್ದೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ರಕ್ಷಣೆ ಕೂಡ ಕೊಡಲಿದೆ. ಮಾಹಿತಿ ಕೋರಿ ಸಲ್ಲಿಸಿದ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಅಥವಾ ಸೂಕ್ತ ಹಿಂಬರಹ ಕೊಡಬೇಕು. 30 ದಿನಗಳೊಳಗೆ ಕೇಳಲಾದ ಮಾಹಿತಿ ಒದಗಿಸಬೇಕಿದೆ. ಸ್ವೀಕರಿಸಿದ ಅರ್ಜಿಯು ಇಲಾಖೆಯ ವ್ಯಾಪ್ತಿಗೆ ಒಳಪಡದಿದ್ದರೆ ಸಂಬಂಧಪಟ್ಟವರಿಗೆ 5 ದಿನಗಳೊಳಗೆ ವರ್ಗಾಯಿಸಬೇಕು. ಈ ಯಾವ ಪ್ರಕ್ರಿಯೆಯನ್ನು ಅನುಸರಿಸದೇ ವಿಳಂಬ ನಿರ್ಲಕ್ಷ್ಯ ಮಾಡಿದ್ದಲ್ಲಿ ದಂಡನೆ, ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಮಾಹಿತಿ ಆಯುಕ್ತರು ತಿಳಿಸಿದರು.

ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿವೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಉತ್ಸಾಹದಿಂದ ಮುಂದಾಗಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕರ ದೂರುಗಳಿಗೆ ಆದ್ಯತೆ ಕೊಡಬೇಕು. ಕಡತಗಳ ನಿರ್ವಹಣೆ ಸಮರ್ಪಕವಾಗಿ ಇರಬೇಕು. ವಿಳಂಬ ಧೋರಣೆ ತೋರಬಾರದು ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗುವ ಅರ್ಜಿಗಳಿಗೆ ಸಕಾಲದಲ್ಲಿ ಅಧಿಕಾರಿಗಳು ದಾಖಲೆ, ಮಾಹಿತಿಯನ್ನ ನೀಡಬೇಕು. ಮಾಹಿತಿ ಹಕ್ಕು ಕಾರ್ಯಾಗಾರಗಳಲ್ಲಿ ಸಲಹೆ ಮಾರ್ಗದರ್ಶನ ಪಡೆದು ಅರ್ಜಿ ವಿಲೇವಾರಿಯಲ್ಲಿ ಸಮರ್ಪಕ ಕ್ರಮಗಳಿಗೆ ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಅಧಿಕಾರಿಗಳೊಂದಿಗೆ ನಡೆದ ಕಾರ್ಯಾಗಾರ ಹಾಗೂ ಸಂವಾದದ ಬಳಿಕ ಮಾಹಿತಿ ಆಯುಕ್ತರು ಸಾರ್ವಜನಿಕರೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂವಾದ ಹಾಗೂ ಚರ್ಚೆ ನಡೆಸಿದರು.

Share This Article