200 ಕೋಟಿಯಲ್ಲಿ ಐಷಾರಾಮಿ ಜೀವನ – ಹಣ ಕೊಟ್ಟ ಕಪ್ಪು ಕುಳಗಳು ಕಂಗಾಲು

Public TV
2 Min Read

ಬಳ್ಳಾರಿ: ಹೌದು, ಈತ ಸಾಮಾನ್ಯನಲ್ಲ. ಬ್ಯಾಂಕ್‍ ಗಳಲ್ಲಿ ಕೋಟಿ ಕೋಟಿ ಸಾಲ ಮಾಡಿದ್ದಾನೆ. ರಾಜಕಾರಣಿಗಳು, ಸಿನಿಮಾ ಸ್ಟಾರ್‍ಗಳು, ಐಎಎಸ್, ಐಪಿಎಸ್ ಅಧಿಕಾರಿಗಳ ಕಪ್ಪು ಹಣ ಈತನ ತಿಜೋರಿ ಸೇರಿತ್ತು. ಬರೋಬ್ಬರಿ 200 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದ ಆ ಹುಡುಗ ಈಗ ನಾನು ದಿವಾಳಿ ಆಗಿದ್ದೀನಿ ಅಂತ ಎಲ್ಲರಿಗೂ ಮಕ್ಮಲ್ ಟೋಪಿ ಹಾಕಿದ್ದಾನೆ 24 ವರ್ಷದ ಇಂಜಿನಿಯರ್ ಪದವೀಧರ ರಕ್ಷಿತ್.

ಬಿಎಂಡಬ್ಲೂ, ಲ್ಯಾಂಬೋರ್ಗಿನಿ, ಪೋರ್ಷೆ ಕಾರುಗಳಲ್ಲಿ ಓಡಾಡ್ತಾ ನಾನೊಬ್ಬ ದೊಡ್ಡ ಬ್ಯುಸಿನೆಸ್ ಮ್ಯಾನ್ ಅಂತ ಕರೆಸಿಕೊಂಡಿದ್ದನು. ರಾಜ್ಯದ ಪ್ರಮುಖ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳಿಂದ ನೂರಾರು ಕೋಟಿ ಹಣವನ್ನ ತಿಂದು ತೇಗಿದ್ದನು. ಈಗ ನನ್ನ ಹತ್ರ ಹಣ ಇಲ್ಲ ಅಂತ ಟೋಪಿ ಹಾಕಿದ್ದನು.


ಬಳ್ಳಾರಿ ನಿವಾಸಿಯಾಗಿರೋ ಈ ರಕ್ಷಿತ್ ಅಂದ್ರೆ ಸಾಕು. ಅದೆಷ್ಟೋ ಗಣ್ಯರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. 2014ರಲ್ಲಿ ಕೈಜಿನ್ ಎಕ್ಸ್ ಪೋರ್ಟ್ ಕಂಪನಿ ತೆಗೆದ. ರೆಡಿಮೇಡ್ ಬಟ್ಟೆಗಳ ದೊಡ್ಡ ಶೋ ರೂಂ ಮಾಡಿದ್ದೀನಿ ಅಂತ ಬೊಗಳೆ ಬಿಟ್ಟ. ಈತನನ್ನ ನಂಬಿದ ರಾಜ್ಯದ ಪ್ರಮುಖ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ತಮ್ಮಲ್ಲಿದ್ದ ಕಪ್ಪು ಹಣವನ್ನ ಈತನಿಗೆ ಕೊಟ್ಟಿದ್ರು. 2 ವರ್ಷ ಲಾಭ ತೋರಿಸಿ ಒಂದಿಷ್ಟು ಚಿಲ್ಲರೆ ಕಾಸನ್ನೂ ಕೊಟ್ಟ. ಈಗ ನಾನು ದಿವಾಳಿ ನನ್ನ ಬಳಿ ಹಣವಿಲ್ಲ ಅಂತಾ ಕೋರ್ಟ್‍ಗೆ ಹೋಗಿದ್ದಾನೆ.

ರಕ್ಷಿತ್ ಹತ್ರ ಹಣ ಹೂಡಿದವರೆಲ್ಲಾ ಯಾವಾಗ ದುಡ್ಡು ಕೇಳೋಕೆ ಶುರು ಮಾಡಿದ್ರೋ ಆಗ ಉಲ್ಟಾ ಹೊಡೆದ. ಕೊನೆಗೆ ಪ್ರಧಾನಿ ಮೋದಿ ನೋಟ್‍ಬ್ಯಾನ್ ಮಾಡಿದ್ಮೇಲೆ, ಜಿಎಸ್‍ಟಿ ತಂದ್ಮೇಲೆ ನಾನು ದಿವಾಳಿಯಾದೆ ಅಂತ ಕೋರ್ಟ್‍ಗೆ ಅರ್ಜಿ ಹಾಕಿ ಈಗ ಊರನ್ನೇ ಬಿಟ್ಟು ಹೋಗಿದ್ದಾನೆ. ಯಾವಾಗ ರಕ್ಷಿತ್ ಕೋರ್ಟ್ ಗೆ ಹೋದ್ನೋ ಈತನ ಬಳಿ ಹಣ ಹೂಡಿದ್ದವರೆಲ್ಲಾ ಈಗ ಸೈಲೆಂಟ್ ಆಗಿದ್ದಾರೆ. ಹಣ ಹೋದ್ರೂ ಪರವಾಗಿಲ್ಲ. ಐಟಿ ಅಧಿಕಾರಿಗಳಿಗೆ ತಗಲಾಕ್ಕೋಳ್ಳೋದು ಬೇಡ ಅಂತ ಸುಮ್ಮನಾಗಿದ್ದಾರೆ.

ಗುಜರಾತ್ ಶಾಸಕರಿಗೆ ಆತಿಥ್ಯ ನೀಡ್ತಿದ್ದಾಗ ಸಚಿವ ಡಿ.ಕೆ.ಶಿವಕುಮಾರ್ ಇದ್ದ ಬಿಡದಿ ರೆಸಾರ್ಟ್ ನಲ್ಲಿ ಐಟಿ ದಾಳಿ ಆಯ್ತು. ಆಗ ಒಂದು ಡೈರಿ ಸಿಕ್ಕಿತ್ತು. ಆ ಡೈರಿಯಲ್ಲಿ ಕೈಜನ್ ಎಕ್ಸ್ ಪೋರ್ಟ್ ನಲ್ಲಿ 3 ಕೋಟಿ ಹಣ ಹೂಡಿದ್ದ ಬಗ್ಗೆ ಮಾಹಿತಿ ಇತ್ತು. ಐಟಿ ದಾಳಿ ಮುಗಿದ್ಮೇಲೆ ರಕ್ಷಿತ್ ದಿವಾಳಿ ಅಂತ ಕೋರ್ಟ್ ಗೆ ಅರ್ಜಿ ಹಾಕಿದ್ದಾನೆ. ಆಶ್ಚರ್ಯ ಅಂದ್ರೆ ರಕ್ಷಿತ್ ತಾಯಿ ಕರ್ನಾಟಕದ ಪ್ರಸಿದ್ಧ ಸರ್ಕಾರಿ ವಕೀಲೆ. ಅವರ ಕ್ರಿಮಿನಲ್ ಐಡಿಯಾಗಳಿಂದಲೇ ಈತ 200 ಕೋಟಿ ಹಣಕ್ಕೆ ಟೋಪಿ ಹಾಕಿದ್ದಾನೆ ಅಂತ ಹೇಳಲಾಗ್ತಿದೆ.

ಹೀಗೆ 200 ಕೋಟಿಗೆ ಟೋಪಿ ಹಾಕಿರುವ ರಕ್ಷಿತ್, ಕೋರ್ಟ್ ನಲ್ಲಿ 55 ಕೋಟಿಗೆ ಲೆಕ್ಕ ಕೊಟ್ಟಿದ್ದಾನೆ. ಈತ ಹಣ ಸಂಗ್ರಹ ಮಾಡೋಕೆ ಯುಬಿ ಸಿಟಿಯಲ್ಲಿ ಪಾರ್ಟಿ ಮಾಡ್ತಿದ್ದ. ಅದಕ್ಕೆ 30 ರಿಂದ 50 ಲಕ್ಷ ಹಣ ಖರ್ಚು ಮಾಡ್ತಿದ್ದ. ಜೊತೆಗೆ ಪೋರ್ಷೆ, ಲ್ಯಾಂಬುರ್ಗಿನಿ ಬಿಎಂಡಬ್ಲ್ಯು ಸೇರಿ ಕೋಟಿ ಕೋಟಿ ಬೆಲೆಯ ಕಾರಲ್ಲೇ ಓಡಾಡ್ತಿದ್ದ. ಇದನ್ನ ನಂಬಿ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಬೇನಾಮಿಯಾಗಿ ಹಣ ಹಾಕಿದ್ರು. ಈಗ ಹಣ ನಮ್ಮದಲ್ಲ ಅಂತಿದ್ದಾರೆ.. ಒಟ್ನಲ್ಲಿ ರಕ್ಷಿತ್ ನಾಪತ್ತೆ. 200 ಕೋಟಿನೂ ನಾಪತ್ತೆ.

Share This Article
Leave a Comment

Leave a Reply

Your email address will not be published. Required fields are marked *