ಕಾಲನ ಕಷ್ಟಗಳಿಗೆಲ್ಲ ತಾಳ್ಮೆಯೇ ಉತ್ತರ

Public TV
2 Min Read

ಚಿತ್ರ: ತ್ರಿಕೋನ
ನಿರ್ದೇಶನ: ಚಂದ್ರಕಾಂತ್
ನಿರ್ಮಾಪಕ: ರಾಜಶೇಖರ್
ತಾರಾಗಣ: ಸುರೇಶ್ ಹೆಬ್ಳಿಕರ್, ಜೂಲಿ ಲಕ್ಷ್ಮಿ, ಅಚ್ಯುತ್ ಕುಮಾರ್, ಸುಧಾರಾಣಿ, ಇತರರು

ಚಂದ್ರಕಾಂತ್ ನಿರ್ದೇಶನದ ತ್ರಿಕೋನ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದೆ. ತ್ರಿಕೋನ ಹೆಸರೇ ಹೇಳುವಂತೆ ಮೂರು ಆಯಾಮದಲ್ಲಿ ಹೇಳಲಾದ ಕಥೆ. ಹಾಗೆಯೇ ಮೂರು ಕಥೆಯನ್ನು ಇದು ಒಳಗೊಂಡಿದೆ. ಮೂರು ಕಥೆಗೂ ಸ್ಯಾಂಡಲ್ ವುಡ್ ಘಟಾನುಘಟಿ ನಟ ನಟಿಯರ ಅಭಿನಯವಿದೆ. ಇಡಿ ಚಿತ್ರದ ಉದ್ದೇಶ ತಾಳ್ಮೆಯ ಮಹತ್ವ ಸಾರುವುದು. ಆಧುನಿಕ ಜಗತ್ತು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದೆ. ಇದರಿಂದ ಸರಳ ಸುಂದರ ಬದುಕನ್ನು ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ. ಏನೇ ಕಷ್ಟ ಕಾರ್ಪಣ್ಯಗಳು ಎದುರಾದರೂ ತಾಳ್ಮೆಯೊಂದಿದ್ರೆ ಅದನ್ನು ಎದುರಿಸಬಹುದು ಎನ್ನುವುದು ಸಿನಿಮಾದ ಸಾರಾಂಶ. 65.45.25 ಹೀಗೆ ಮೂರು ಪೀಳಿಗೆಯ ಕಥೆ ಚಿತ್ರದಲ್ಲಿದ್ದು, ಒಂದೊಂದು ಪೀಳಿಗೆ ತಾಳ್ಮೆ, ಶಕ್ತಿ, ಅಹಂ ಅನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

ಮಂಗಳೂರಿನಲ್ಲಿರುವ ತಮ್ಮ ಐಷಾರಾಮಿ ಹೊಟೇಲ್ ನ್ನು ಹರಾಜಿನಲ್ಲಿ ಉಳಿಸಿಕೊಳ್ಳಲು ಉದ್ಯಮಿ ನಟರಾಜ್ ಹಾಗೂ ಪತ್ನಿ ಪಾರ್ವತಿ ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಹೊರಡುತ್ತಾರೆ. ಅದೇ ಐಷಾರಾಮಿ ಹೋಟೆಲ್ ಕೊಂಡುಕೊಳ್ಳಲು ಯುವ ಉದ್ಯಮಿ ತ್ರಿವಿಕ್ರಮ್ ಮಂಗಳೂರಿಗೆ ಹೊರಡುತ್ತಾನೆ. ಆ ಹೋಟೆಲ್ ನಲ್ಲಿ ರಜೆ ದಿನವನ್ನು ಕಳೆಯಲು ಕೋದಂಡರಾಮನ ಕುಟುಂಬವೂ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಹೀಗೆ ಮಂಗಳೂರಿಗೆ ಪ್ರಯಾಣ ಬೆಳೆಸೋ ಈ ಮೂವರ ಪ್ರಯಾಣದ ಹಾದಿ ಮಾತ್ರ ಸುಖಕರವಾಗಿರೋದಿಲ್ಲ. ಮೂವರು ಹಲವಾರು ಗಂಡಾಂತರಗಳನ್ನು ಎದುರಿಸುತ್ತಾರೆ. ಯಾಕೆ ಹೀಗಾಗುತ್ತಿದೆ ಅನ್ನೋದೇ ದೊಡ್ಡ ಯಕ್ಷ ಪ್ರಶ್ನೆಯಾಗಿರುತ್ತೆ. ಅಸಲಿಗೆ ಕಾಲನಿಂದ ಎದುರಾದ ಆ ಗಂಡಾಂತರಗಳಿಗೆಲ್ಲ ಕಾರಣವೇನು, ಅವರಿಗೆಲ್ಲ ಯಾಕೆ ಹೀಗಾಯ್ತು, ಆ ಸಮಸ್ಯೆಯನ್ನು ಅಹಂ, ಶಕ್ತಿ, ತಾಳ್ಮೆಯಿಂದ ಎದುರಿಸಿದ ಮೂವರಲ್ಲಿ ಯಾರು ಸೈ ಎನಿಸಿಕೊಳ್ಳುತ್ತಾರೆ. ಯಾರು ಪಾಠ ಕಲಿತ್ರು ಅನ್ನೋದೇ ತ್ರಿಕೋನ. ಇದನ್ನೂ ಓದಿ: ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

ಒಂದೇ ಸಿನಿಮಾದಲ್ಲಿ ಮೂರು ವಿಭಿನ್ನ ಕಥೆಯನ್ನು ಹೇಳ ಹೊರಟ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಲೇಬೇಕು. ಹಾಗೆಯೇ ಇವತ್ತಿನ ದಿನಮಾನಕ್ಕೆ ಪ್ರಸ್ತುತ ಎನಿಸುವ ಕಥೆ ಆಯ್ಕೆ ಮಾಡಿಕೊಂಡು ಗೆದ್ದಿದ್ದಾರೆ. ಅದನ್ನು ದೃಶ್ಯ ರೂಪಕ್ಕೆ ತರುವ ಪ್ರಯತ್ನದಲ್ಲಿ ಅಲ್ಲಲ್ಲಿ ಕೊಂಚ ಎಡವಿರೋದು ತಿಳಿಯುತ್ತೆ. ಪ್ರಯಾಣದಲ್ಲಿ ಒಂದಷ್ಟು ಕಡೆ ಪ್ರಯಾಸದ ಕಥೆ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಆಗಾಗ ಪರೀಕ್ಷೆ ಮಾಡುತ್ತೆ. ಮೊದಲಾರ್ಧ ಸರಾಗವಾಗಿ ನೋಡಿಸಿಕೊಂಡು ಹೋಗಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿ, ದ್ವಿತೀರ್ಯಾದ ಮಂದಗತಿಯಲ್ಲಿ ಸಾಗಿ ನೋಡುಗರನ್ನು ಕಾಡುತ್ತೆ. ಎಲ್ಲಾ ಅನುಭವಿ ತಾರಾಗಣವಿದ್ದರೂ, ನೈಜ ಅಭಿನಯ ಮೂಡಿ ಬಂದರೂ ಚಿತ್ರಕಥೆ, ಅದನ್ನು ಹೇಳ ಹೊರಟ ಪರಿ ಪ್ರಯಾಸವಾಗುವಂತೆ ಮಾಡಿದೆ. ಸಾಧುಕೋಕಿಲ ಇಡೀ ಸಿನಿಮಾದ ಶಕ್ತಿ. ಅವರು ತೆರೆ ಮೇಲೆ ಬಂದಾಗಲೆಲ್ಲ ಸಿನಿಮಾಗೆ ಹೊಸ ಕಳೆ ಸಿಕ್ಕಿದೆ. ಕಮರ್ಷಿಯಲ್ ಎಳೆಯಲ್ಲಿ ಸಿನಿಮಾ ಕಟ್ಟಿಕೊಟ್ಟ ರೀತಿಯೂ ಮೆಚ್ಚುವಂತದ್ದು, ಹಾಡುಗಳು ಚಿತ್ರಕ್ಕೆ ಪೂರಕವಾಗಿದೆ ಹೊರತು ನೆನಪಿನಂಗಳದಲ್ಲಿ ಉಳಿಯೋದು ಕಷ್ಟ. ತಾಂತ್ರಿಕವಾಗಿ ಸಿನಿಮಾ ಗಟ್ಟಿಯಾಗಿದೆ. ಇನ್ನಷ್ಟು ಕುಸುರಿ ಕೆಲಸಗಳನ್ನು ಮಾಡಿದ್ರೆ ಖಂಡಿತ ಸಿನಿಮಾ ರಂಗೇರಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿತ್ತು. ಒಂದಷ್ಟು ನ್ಯೂನ್ಯತೆಗಳನ್ನು ಬದಿಗೊತ್ತಿ ಸಿನಿಮಾ ನೋಡಿದ್ರೆ ಖಂಡಿತ ಮನರಂಜನೆಗೆ ಕೊರತೆ ಇಲ್ಲ. ಇದನ್ನೂ ಓದಿ: ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

Share This Article
Leave a Comment

Leave a Reply

Your email address will not be published. Required fields are marked *