ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

Public TV
2 Min Read

ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತೆಲಂಗಾಣ (Telangana) ಸಿಎಂ ರೇವಂತ್ ರೆಡ್ಡಿ (Revanth Reddy) ಕ್ಷಮೆಯಾಚಿಸಿದ್ದಾರೆ.

ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾನು ದೃಢ ನಂಬಿಕೆಯುಳ್ಳವನು. ವರದಿಗಳಲ್ಲಿ ಬಿಂಬಿಸಲಾದ ಹೇಳಿಕೆಗಳಿಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಭಾರತ ಸಂವಿಧಾನ ಮತ್ತು ಅದರ ಸ್ವಾತಂತ್ರ‍್ಯದ ನನಗೆ ಗೌರವವಿದೆ ಮತ್ತು ಭವಿಷ್ಯದಲ್ಲಿಯೂ ಗೌರವವಿರುತ್ತದೆ ಆದ್ದರಿಂದ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ರೇವಂತ್ ರೆಡ್ಡಿ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ್ದ ರೇವಂತ್ ರೆಡ್ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ 15 ತಿಂಗಳ ಬಳಿಕ ಜಾಮೀನು ಸಿಕ್ಕಿತ್ತು. ಆಗ ಮುಖ್ಯಮಂತ್ರಿಗಳು ಇದನ್ನು ರಾಜಕೀಯ ನಾಟಕವೆಂದು ಕರೆದಿದ್ದರು. ಈಗ ಕವಿತಾ ಅವರಿಗೆ ಐದೇ ತಿಂಗಳಲ್ಲಿ ಜಾಮೀನು ಸಿಕ್ಕಿರುವ ಕುರಿತು ನನಗೆ ಅನುಮಾನವಿದೆ. ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ (K. Chandrashekar Rao) ನಡುವಿನ ಒಪ್ಪಂದದಿಂದ ಜಾಮೀನು ಸಿಕ್ಕಿರಬಹುದು ಎಂದು ಹೇಳಿಕೆ ನೀಡುವ ಮೂಲಕ ಸುಪ್ರೀಂ ಜಾಮೀನಿನ ಬಗ್ಗೆಯೇ ಅನಮಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಯ ಬಗ್ಗೆ ಗುರುವಾರ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿ, ಸಂವಿಧಾನಿಕ ಹುದ್ದೆಯಲ್ಲಿರುವ ನೀವು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯೇ? ನಿಮ್ಮ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ. ರಾಜಕೀಯ ಕಾರಣಗಳಿಗಾಗಿ ನಾವು ಏಕೆ ಆದೇಶವನ್ನು ನೀಡಬೇಕು? ನಿಮ್ಮ ರಾಜಕೀಯ ದ್ವೇಷಗಳ ನಡುವೆ ಏಕೆ ನ್ಯಾಯಾಲಯವನ್ನು ಎಳೆದು ತರುತ್ತೀರಿ ಎಂದು ಪ್ರಶ್ನಿಸಿ ರೇವಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

Share This Article