ವಿಶ್ವ ಮಟ್ಟದಲ್ಲಿ ಭಾರತದ ಗೌರವ ಉನ್ನತ ಶಿಖರಕ್ಕೇರಿದೆ- ಪ್ರಧಾನಿ ಮೋದಿ

Public TV
2 Min Read

– ಏಳು ದಿನಗಳ ಅಮೆರಿಕ ಪ್ರವಾಸದಿಂದ ಮರಳಿದ ಪ್ರಧಾನಿ
– ಭವ್ಯ ಕಾರ್ಯಕ್ರಮದ ಮೂಲಕ ಮೋದಿಗೆ ಸ್ವಾಗತ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಗೌರವ ಉನ್ನತ ಶಿಖರಕ್ಕೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಏಳು ದಿನಗಳ ಅಮೆರಿಕ ಪ್ರವಾಸವನ್ನು ಮುಗಿಸಿ ಮರಳಿ ತವರಿಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ನವದೆಹಲಿಯ ಪಾಲಂ ವಿಮಾನ ನಿಲ್ದಾಣ ಬಳಿ ಭವ್ಯ ಕಾರ್ಯಕ್ರಮದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸುಮಾರು 50 ಸಾವಿರಕ್ಕೂ ಅಧಿಕ ಜನ ಮೋದಿಯವರನ್ನು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದರು.

2014ರಲ್ಲಿ ನಾನು ಅಧಿಕಾರ ವಹಿಸಿಕೊಂಡ ನಂತರವೂ ವಿಶ್ವಸಂಸ್ಥೆಗೆ ಹೋಗಿದ್ದೆ, ಈಗಲೂ ವಿಶ್ವಸಂಸ್ಥೆಗೆ ಹೋಗಿದ್ದೇನೆ. ಈ ಐದು ವರ್ಷಗಳಲ್ಲಿ ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ. ಭಾರತದ ಮೇಲಿನ ಗೌರವ, ಭಾರತದ ಬಗೆಗಿನ ಉತ್ಸಾಹ ಗಮನಾರ್ಹವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣೀಕರ್ತರಾದ 130 ಕೋಟಿ ದೇಶವಾಸಿಗಳಿಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಮೋದಿ ಭಾವುಕರಾದರು.

ಇದೇ ವೇಳೆ ಪಾಲಂ ವಿಮಾನ ನಿಲ್ದಾಣದ ಬಳಿ ನೆರೆದಿದ್ದ 50 ಸಾವಿರಕ್ಕೂ ಅಧಿಕ ಜನರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಾನು ಮನೆಗೆ ಮರಳಿದ ಸ್ಮರಣೀಯ ಸ್ವಾಗತವಾಗಿದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬ ಭಾರತೀಯನಿಗೂ ನಮಸ್ಕರಿಸುತ್ತೇನೆ ಎಂದು ತಿಳಿಸಿದರು.

ಭಾಷಣದ ವೇಳೆ ಹೌಡಿ ಮೋದಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದ ಮೋದಿ, ಭವ್ಯ ಕಾರ್ಯಕ್ರಮ ಆಯೋಜಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ಅಮೆರಿಕದ ಭಾರತೀಯರಿಗೆ ಧನ್ಯವಾದ ಅರ್ಪಿಸಿಸಿದರು.

ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಭವ್ಯವಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನೂ ಮೆರುಗು ತಂದರು. ಈ ಎಲ್ಲದರ ಜೊತೆಗೆ ಯುಎಸ್‍ಎ, ಟೆಕ್ಸಾಸ್ ಹಾಗೂ ಹ್ಯೂಸ್ಟನ್‍ನಲ್ಲಿರುವ ಭಾರತೀಯ ಸಮುದಾಯ ತಮ್ಮ ಅಸ್ಥಿತ್ವವನ್ನು ಪ್ರದರ್ಶಿಸಿದ ರೀತಿ ಅತ್ಯದ್ಭುತವಾಗಿತ್ತು ಎಂದು ಕೊಂಡಾಡಿದರು.

2016ರ ಸರ್ಜಿಕಲ್ ಸ್ಟ್ರೈಕ್ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಕಾರ್ಯಾಚರಣೆ ಸಮಯದಲ್ಲಿ ಶೌರ್ಯ ಹಾಗೂ ಪರಾಕ್ರಮ ಮೆರೆದ ಭಾರತೀಯ ಸೈನಿಕರನ್ನು ಶ್ಲಾಘಿಸಿದರು. ಮೂರು ವರ್ಷಗಳ ಹಿಂದೆ ಸೆಪ್ಟೆಂಬರ್ 28ರಂದು ನನ್ನ ದೇಶದ ಧೈರ್ಯಶಾಲಿ ಸೈನಿಕರು ಶಸ್ತ್ರಸಜ್ಜಿತ ದಾಳಿ ನಡೆಸುವ ಮೂಲಕ ಭಾರತದ ಗತವೈಭವವನ್ನು ಪ್ರದರ್ಶಿಸಿದರು. ಇಂದು ಆ ರಾತ್ರಿಯನ್ನು ನೆನಪಿಸಿಕೊಳ್ಳುತ್ತ, ನಮ್ಮ ಕೆಚ್ಚೆದೆಯ ಸೈನಿಕರ ಧೈರ್ಯವನ್ನು ನಾನು ವಂದಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *