ಮತ್ತೆ ರೆಸಾರ್ಟ್ ರಾಜಕಾರಣ ಶುರು – ಬೆಂಗಳೂರಿಗೆ ಬರ್ತಿದ್ದಾರೆ ಗುಜರಾತ್ ‘ಕೈ’ ಶಾಸಕರು

Public TV
1 Min Read

ಬೆಂಗಳೂರು: ಕರ್ನಾಟಕದ ಜನರು ಮತ್ತೊಂದು ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಬೇಕಿದೆ. ಈ ಹಿಂದೆ ಹಲವಾರು ಬಾರಿ ರಾಜ್ಯದ ರಾಜಕೀಯ ಪಕ್ಷಗಳ ರೆಸಾರ್ಟ್ ರಾಜಕಾರಣ ನೋಡಿದ್ದ ಜನರು ಇಂದು ಮಧ್ಯರಾತ್ರಿಯಿಂದ ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕಾರಣವನ್ನು ನೋಡಬೇಕಿದೆ.

ಗುಜರಾತ್ ನಲ್ಲಿ ಶಾಸಕರ ಪಕ್ಷಾಂತರ ಪರ್ವಕ್ಕೆ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ. ರಾಜ್ಯಸಭಾ ಚುನಾವಣೆ ವೇಳೆ ಕುದುರೆ ವ್ಯಾಪಾರ ನಡೆಯಬಹುದು ಎಂಬ ಭಯದಿಂದ ಗುಜರಾತ್ ನ 17 ಶಾಸಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನ 6 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ 17 ಶಾಸಕರು ಆಗಮಿಸಲಿದ್ದು, ಇಂದು ರಾತ್ರಿ 1.30ರ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಅಲ್ಲಿಂದ ಎಲ್ಲರೂ ನೇರವಾಗಿ ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್ ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ 45 ಶಾಸಕರು ಬರುತ್ತಾರೆ ಎನ್ನಲಾಗಿದ್ದರೂ ಸದ್ಯಕ್ಕೆ 17 ಶಾಸಕರಿಗೆ ಮಾತ್ರ ವಿಮಾನ ಟಿಕೆಟ್ ಬುಕ್ ಆಗಿದೆ.

ಪಕ್ಷಾಂತರ ಪರ್ವ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಸಕರನ್ನು ಮುಂಬೈ ಅಥವಾ ಕರ್ನಾಟಕಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ ಬೆಂಗಳೂರು ಸೇಫ್ ಎಂಬ ಕಾರಣಕ್ಕೆ 17 ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

ಗುಜರಾತ್ ನಿಂದ ಅಹಮದ್ ಪಟೇಲ್ ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದು ಇವರನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕು ಎಂದು ಪಣತೊಟ್ಟು ಕಾಂಗ್ರೆಸ್ ಹೈಕಮಾಂಡ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ.

 ಇದನ್ನೂ ಓದಿ: ಕಾಂಗ್ರೆಸ್ಸಿಗೆ ಈಗ ಗುಜರಾತ್‍ನಲ್ಲಿ ಕೈ ಶಾಸಕರಿಂದಲೇ ಶಾಕ್

Share This Article
Leave a Comment

Leave a Reply

Your email address will not be published. Required fields are marked *