ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ

Public TV
2 Min Read

ನವದೆಹಲಿ: ಆಲಮಟ್ಟಿ – ಯಾದಗಿರಿ ರೈಲು (Almatti- Yadagiri Train Project) ಮಾರ್ಗ ಯೋಜನೆಗೆ ಅನುಮೋದನೆ ನೀಡುವಂತೆ ರಾಯಚೂರು ಸಂಸದ ಜಿ.ಕುಮಾರ್ ನಾಯಕ್ (G Kumar Naik) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನವದೆಹಲಿಯಲ್ಲಿ (Newdelhi) ಗುರುವಾರ (ಡಿ.12) ಭೇಟಿ ಮಾಡಿ ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡುವಂತೆ ಪ್ರಸ್ತಾಪಿಸಿದರು.ಇದನ್ನೂ ಓದಿ: ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದಲ್ಲಿ ರೈಲ್ವೆ ಸಂಪರ್ಕ ಜಾಲ ಕಡಿಮೆ ಇದೆ. ಈ ಲೋಪವನ್ನು ಸರಿಪಡಿಸಲು ರಾಜ್ಯದಲ್ಲಿ ರೈಲು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಬೇಡಿಕೆಯು ದಶಕಗಳಷ್ಟು ಹಳೆಯದು ಎಂದು ಸಚಿವರ ಗಮನಕ್ಕೆ ತಂದರು.

ಉದ್ದೇಶಿತ ರೈಲು ಮಾರ್ಗವು ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಯಾಣದ ಅಂತರ ಗಣನೀಯವಾಗಿ ಕಡಿಮೆ ಮಾಡುತ್ತದೆ. ಪ್ರಸ್ತುತ ಪ್ರಯಾಣವನ್ನು 328 ಕಿ.ಮೀನಿಂದ 165 ಕಿ.ಮೀಗೆ ಕಡಿತಗೊಳಿಸುತ್ತದೆ. ಈ ಪ್ರದೇಶದಲ್ಲಿ ಬೆಳೆಯುವ ಆರು ಲಕ್ಷ ಟನ್‌ಗಳಷ್ಟು ಭತ್ತ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳ ಸಾಗಣೆಗೆ ಈ ರೈಲು ಮಾರ್ಗದಿಂದ ಅನುಕೂಲವಾಗುತ್ತದೆ. ಈ ಪ್ರದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಲಿದೆ. ಮುಂಬರುವ ಬಜೆಟ್‌ನಲ್ಲಿ ಈ ಯೋಜನೆಯನ್ನು ಸೇರಿಸಿ ಶೀಘ್ರ ಅನುಷ್ಠಾನ ಮಾಡಬೇಕು ಎಂದು ಕೋರಿದರು.

ಈ ಪ್ರಸ್ತಾವನೆಗೆ ಸೂಕ್ತ ಆದ್ಯತೆ ನೀಡಿ, ಪರಿಗಣಿಸುವುದಾಗಿ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದರು.ಇದನ್ನೂ ಓದಿ: ವಾಯುಭಾರ ಕುಸಿತದ ಎಫೆಕ್ಟ್; ತಮಿಳುನಾಡಿನಾದ್ಯಂತ ಭಾರೀ ಮಳೆ, ಪ್ರವಾಹ ಮುನ್ಸೂಚನೆ!

Share This Article