ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮೈನವಿರೇಳಿಸಿದ ದಿ ಟೋರ್ನಾಡಸ್ ಬೈಕ್ ಸ್ಟಂಟ್

Public TV
1 Min Read

ಬೆಂಗಳೂರು: 71ನೇ ಗಣರಾಜ್ಯೋತ್ಸವ ದಿನವನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯಪಾಲ ವಿ.ಆರ್.ವಾಲಾ ಧ್ವಜಾರೋಹಣ ನೆರವೇರಿಸಿದರು. ವಾಯುಸೇನೆ ಹೆಲಿಕಾಪ್ಟರ್ ಮೂಲಕ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಯ್ತು. ಬಳಿಕ ರಾಜ್ಯಪಾಲರು ಪರೇಡ್ ವೀಕ್ಷಿಸಿ ಗೌರವ  ವಂದನೆ ಸ್ವೀಕಾರ ಮಾಡಿದರು.

1750 ಜನರ 44 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರ ತಂಡ ಪಥ ಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ ರಾಜ್ಯ ಸರ್ಕಾರದ ಸಾಧನೆ ಬಿಚ್ಚಿಟ್ಟರು.

 

ರಾಜ್ಯಪಾಲರ ಭಾಷಣದ ಬಳಿಕ 2 ಸಾವಿರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಮಾರ ಭಾರತ್ ಮಹಾನ್, ಕಲ್ಯಾಣ ಕ್ರಾಂತಿ, ಭಾರತ ಭಾಗ್ಯವಿಧಾತ ನೃತ್ಯ ರೂಪಕ ನೋಡುಗರ ಮನ ಸೆಳೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಮೈನವಿರೇಳಿಸುವ ಆಕರ್ಷಕ ಬೈಕ್ ಸ್ಟಂಟ್ ನಡೆಯಿತು. ದಿ ಆರ್ಮಿ ಸರ್ವೀಸ್ ಕಾರ್ಪ್ಸ್ 20 ಜನರ ತಂಡದಿಂದ ದಿ ಟೋರ್ನಾಡಸ್ ಬೈಕ್ ಸ್ಟಂಟ್ ನಡೆಸಿದರು.

ಎಎಸ್ಸಿ ಟೋರ್ನಾಡಸ್ ತಂಡ 1982 ರಲ್ಲಿ ರಚನೆ ಆಗಿದ್ದು, ವೇಗ ಮತ್ತು ಚಾಕಚಕ್ಯತೆ ನಿರ್ವಹಣೆ, ಸಾಹಸದ ಮೂಲಕ ಹೆಸರು ಮಾಡಿರುವ ತಂಡ ಇದು. ಕ್ಯಾಪ್ಟನ್ ಧೀರಜ್ ಸಿಂಗ್ ಈ ತಂಡವನ್ನ ನಿರ್ವಹಣೆ ಮಾಡುತ್ತಿದ್ದಾರೆ. 20 ವಿಶ್ವದಾಖಲೆ ನಿರ್ಮಿಸಿದ ತಂಡ ಟ್ಯೂಬ್ ಲೈಟ್ ಬ್ಲಾಸ್ಟ್ ಸ್ಟಂಟ್, ಬೆಂಕಿ ಜೊತೆಗಿನ ಸ್ಟಂಟ್, ಬೈಕ್ ಮೇಲೆ ವಿವಿಧ ಭಂಗಿಗಳಿಂದ ಕಸರತ್ತು ಮಾಡಿ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು. ರಾಜ್ಯ ಪೊಲೀಸ್ ಆಂತರಿಕ ಭದ್ರತಾ ಗರುಡ ತಂಡದಿಂದ ಬಸ್ ಇಂಟರ್ ವೆನ್ಷನ್ (ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ) ಅಣಕು ಪ್ರದರ್ಶನ ನಡೀತು. ಬಳಿಕ ರಾಜ್ಯಪಾಲ ವಿ.ಆರ್.ವಾಲಾ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *