ಬಿಸಿಸಿಐ ಕಾಮೆಂಟರಿ ಪ್ಯಾನೆಲ್‍ನಿಂದ ಸಂಜಯ್ ಮಂಜ್ರೇಕರ್ ಔಟ್

Public TV
3 Min Read

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‍ನಿಂದ ಕೈಬಿಡಲಾಗಿದೆ. ಜೊತೆಗೆ ಐಪಿಎಲ್‍ನಿಂದಲೂ ಕೈಬಿಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಂಜಯ್ ಮಂಜ್ರೇಕರ್ ಅವರನ್ನು ಯಾಕೆ ಬಿಸಿಸಿಐ ಕೈಬಿಟ್ಟಿದೆ? ಈ ಸಮಯದಲ್ಲಿ ಇಂತಹ ನಿರ್ಧಾರ ಯಾಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ವರದಿಗಳ ಪ್ರಕಾರ, ಬಿಸಿಸಿಐಗೆ ಸಂಜಯ್ ಮಂಜ್ರೇಕರ್ ಅವರ ಕೆಲಸ ತೃಪ್ತಿ ತಂದಿಲ್ಲ ಎನ್ನಲಾಗಿದೆ.

ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮೊದಲು ಸೌರವ್ ಗಂಗೂಲಿ ಮಂಜ್ರೇಕರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. 2019ರ ಜೂನ್ 9 ರಂದು ಹೆಸರು ಪ್ರಸ್ತಾಪಿಸದೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸೌರವ್ ಗಂಗೂಲಿ, ಟ್ವಿಟ್ಟರ್ ನಲ್ಲಿ ಅವರು ಮಾಡಿದ ಕಾಮೆಂಟ್, ಬ್ಯಾಟಿಂಗ್ ಅರ್ಥಹೀನ. ಅವರಿಗೆ ಆಲೋಚನೆಗಳ ಕೊರತೆಯಿದೆ. ಅವರು ಕೇವಲ ನಕಾರಾತ್ಮಕ ರೀತಿಯಲ್ಲಿ ಗಮನ ಸೆಳೆಯುವವರಾಗಿರಬಹುದು ಎಂದು ಬರೆದುಕೊಂಡಿದ್ದರು.

ಮಂಜ್ರೇಕರ್ ಅವರು 1996ರಲ್ಲಿ ನಿವೃತ್ತಿಯಾದ ನಂತರ ಕಳೆದ 3 ವಿಶ್ವಕಪ್ ಮತ್ತು ಎಲ್ಲಾ ಪ್ರಮುಖ ಐಸಿಸಿ ಪಂದ್ಯಾವಳಿಗಳಿಗೆ ಕಾಮೆಂಟರಿ ಪ್ಯಾನೆಲ್‍ನ ಭಾಗವಾಗಿದ್ದರು. ಆದರೆ ಮಂಡಳಿ ಮೂಲಗಳ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಧರ್ಮಶಾಲಾದಲ್ಲಿ ಮಳೆಯಿಂದಾಗಿ ರದ್ದಾದ ಏಕದಿನ ಪಂದ್ಯದ ವೇಳೆ ಅವರು ಹಾಜರಿರಲಿಲ್ಲ. ಆದರೆ ಸುನೀಲ್ ಗವಾಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್ ಅವರು ಬಿಸಿಸಿಐ ಕಾಮೆಂಟರಿ ಪ್ಯಾನೆಲ್ ಸೇರಿದ ಸ್ಥಳದಲ್ಲಿದ್ದರು. ಹೀಗಾಗಿ ಅಂದಿನಿಂದ ಅವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಜಡೇಜಾ ಬಗ್ಗೆ ವಿವಾದಾತ್ಮಕ ಹೇಳಿಕೆ:
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಜರ್ ನಡುವೆ ವಾಕ್ ಯುದ್ಧ ನಡೆದಿತ್ತು. ಅಂದು ಜಡೇಜಾರಂತಹ `ಬಿಟ್ಸ್ ಅಂಡ್ ಪೀಸಸ್’ ಆಟಗಾರನಿಗೆ ನಾನು ಅಭಿಮಾನಿಯಲ್ಲ. ಜಡೇಜಾ ಟೆಸ್ಟ್ ಏಕದಿನ ಮಾದರಿ ಸಿಮೀತ ಓವರ್ ಗಳ ಕ್ರಿಕೆಟ್‍ಗೆ ಫಿಟ್ ಅಲ್ಲ. ಆತ ಟೆಸ್ಟ್ ಕ್ರಿಕೆಟ್ ಮಾತ್ರ ಅಗತ್ಯ ಎಂದು ವ್ಯಾಖ್ಯಾನಿಸಿದ್ದರು.

ಮಂಜ್ರೇಕರ್ ಅವರ ಈ ಕಾಮೆಂಟ್‍ಗಳಿಗೆ ತಿರುಗೇಟು ನೀಡಿದ್ದ ಜಡೇಜಾ, ತನ್ನ ಸ್ಥಾನ ಯಾವುದು ಎಂದು ತಿಳಿದುಕೊಂಡು ಮಾತನಾಡಿ. ನಿಮಗಿಂತ ಹೆಚ್ಚು ಪಂದ್ಯಗಳನ್ನು ದೇಶದ ಪರ ಆಡಿದ್ದೇನೆ ಎಂದಿದ್ದರು.

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೆಎಲ್ ರಾಹುಲ್ ಅವರಿಗೆ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮಂಜ್ರೇಕರ್ ಅವರು, ಈ ಪಂದ್ಯದಲ್ಲಿ ಬೌಲರ್ ಗಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದಿದ್ದರು. ಮಂಜ್ರೇಕರ್ ಅವರ ಅಭಿಪ್ರಾಯಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಜಡೇಜಾ, ಆ ಬೌಲರ್ ಹೆಸರನ್ನು ಹೇಳಿ ಎಂದು ಅಣಕಿಸಿದ್ದರು.

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 18 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದಿದ್ದರು. ಬೌಲರ್ ಗಳ ಪ್ರದರ್ಶನವನ್ನು ಪರಿಗಣಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದರೆ ಜಡೇಜಾ ಅವರಿಗೆ ಲಭಿಸುತ್ತಿತ್ತು. ಜಡೇಜಾ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಮಂಜ್ರೇಕರ್ ಅವರು, ನಿನಗೆ ಅಥವಾ ಬುಮ್ರಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬಹುದಿತ್ತು. ಬುಮ್ರಾಗೆ ಏಕೆ ಎಂದರೆ ಆತ ಮಾಡಿದ 3, 10, 18 ಮತ್ತು 20 ಓವರ್ ಗಳ ಎಕಾನಮಿ ತುಂಬಾ ಉತ್ತಮವಾಗಿದೆ ಎಂದು ತಮ್ಮ ಸಮರ್ಥನೆಯನ್ನು ತಿಳಿಸಿದ್ದರು.

ಹರ್ಷ ಭೋಗ್ಲೆಗೆ ಅವಮಾನ:
ಮಂಜ್ರೇಕರ್ ತಮ್ಮ ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದ ಏಕೈಕ ಘಟನೆ ಹಲವು ಬಾರಿ ನಡೆದಿದೆ. ಕಳೆದ ವರ್ಷ ಕೋಲ್ಕತ್ತಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸಹವರ್ತಿ ಹರ್ಷ ಭೋಗ್ಲೆ ಅವರನ್ನು ಅವಮಾನಿಸಲು ಪ್ರಯತ್ನಿಸಿದ್ದರು. ‘ನೀವು ಕ್ರಿಕೆಟ್ ಆಡಿಲ್ಲ. ಕ್ರಿಕೆಟ್ ಆಟಗಾರರು ಮಾತ್ರ ಮೈದಾನದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಮಾತನಾಡಬಹುದು’ ಎಂದು ಹೇಳಿ ಅಣಕಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *