ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

Public TV
1 Min Read

ಬೆಂಗಳೂರು: ನಟ ದರ್ಶನ್ (Challenging Star Darshan) ಟೀಂನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ತಂದೆ-ತಾಯಿ ಇಂದು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

ಮಾಜಿ ಸಚಿವ ಆಂಜನೇಯ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ಭೇಟಿಯಾದ ಪೋಷಕರು ಸಿಎಂ ಮುಂದೆ ಅಳಲು ತೋಡಿಕೊಂಡರು. ಸಿಎಂ ಭೇಟಿ ವೇಳೆ ತಮ್ಮ ಮನೆಯ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ರೇಣುಕಾಸ್ವಾಮಿ ತಂದೆ-ತಾಯಿ ಕಣ್ಣೀರು ಹಾಕಿದರು.

ಸದ್ಯ ಪೊಲೀಸರ ತನಿಖೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ ರೇಣುಕಾಸ್ವಾಮಿ ತಂದೆ-ತಾಯಿ, ಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದ್ರು. ಪೋಷಕರ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ರು. ಇದನ್ನೂ ಓದಿ: ಪವಿತ್ರಾಗೌಡ ಬಂಧನವಾದಾಗ ವಿಚಾರಣೆ ತಂಡದಲ್ಲಿದ್ದ ಮಹಿಳಾ ಪಿಎಸ್‌ಐಗೆ ನೋಟಿಸ್

ಜೂನ್ 8 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಅಲ್ಲಿಂದ ಪಟ್ಟಣಗೆರೆ ಶೆಡ್‍ಗೆ ಕರೆದೊಯ್ದು ಚಿತ್ರಹಿಸೆ ನೀಡಿ ದರ್ಶನ್ & ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿತ್ತು. ಕೊಲೆ ಬಳಿಕ ಮೃತದೇಹವನ್ನು ಸುಮ್ಮನಹಳ್ಳಿ ಮೊರಿ ಬಳಿ ಎಸೆಯಲಾಗಿತ್ತು.

ಇತ್ತ ನಾಲ್ವರು ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ನಾಲ್ವರು ಶರಣಾಗಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ನಿಜ ಬಣ್ಣ ಬಯಲಾಗಿದೆ. ಪ್ರಕರಣ ಸಂಬಂಧ 17 ಆರೋಪಿಗಳನ್ನು ಬಂಧಿಸಲಾಗಿದ್ದು, ಜೈಲಿಗಟ್ಟಲಾಗಿದೆ.

Share This Article