ಬೆಂಗಳೂರು: ಅಪಹರಣಕ್ಕೆ ಸೂಚನೆ ನೀಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಬಾರದು ಎಂದು ದರ್ಶನ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ದರ್ಶನ್ (Darshan) ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನನ್ನು (Bail) ರದ್ದು ಮಾಡುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈಗ ತೀರ್ಪನ್ನು ಕಾಯ್ದಿರಿಸಿದೆ.
ಜುಲೈ 24 ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ದರ್ಶನ್ ದಿಢೀರ್ ಭೇಟಿ
ದರ್ಶನ್ ವಾದ ಏನು?
ನಾನು ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ರೇಣುಕಾಸ್ವಾಮಿ ಅಪಹರಣಕ್ಕೆ ಸೂಚನೆ ನೀಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ನನ್ನ ಮತ್ತು ಎ3 ಆರೋಪಿಯಾಗಿರುವ ಪವನ್ ನಡುವೆ ಕರೆಗಳು ಅಥವಾ ವಾಟ್ಸಪ್ ಸಂದೇಶಗಳ ವಿನಿಮಯ ಆಗಿಲ್ಲ.
ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.. ಘಟನೆ ನಡೆದ 7 ದಿನಗಳ ನಂತರ ಕಿರಣ್ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳಾದ ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ನ್ಯಾಯಾಲಯದಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ
ಮೂರು ಸೆಕೆಂಡ್ ವಿಡಿಯೋ ಇದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. ಆದರೆ ಈ ವಾದದಲ್ಲಿ ಯಾವುದೇ ಹುರುಳಿಲ್ಲ. ಮೂರು ಸೆಕೆಂಡ್ ವಿಡಿಯೋ ಅಸ್ತಿತ್ವದಲ್ಲೇ ಇಲ್ಲ. ಮೂರು ಸೆಕೆಂಡಿನ ವಿಡಿಯೋ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿಲ್ಲ ಅಥವಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲ್ಲ. ಮರಣದ ಸಮಯವನ್ನು ಪ್ರಾಸಿಕ್ಯೂಷನ್ ಕಥೆಗೆ ಅನುಗುಣವಾಗಿ ನಿರ್ಧರಿಸಲಾಗಿದೆ ಎಂದು ಕಾರಣಗಳನ್ನು ನೀಡಲಾಗಿದೆ.