ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಆರೋಪಿಗಳ ಜಾಮೀನು ರದ್ದಾಗುತ್ತಿದ್ದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ನಟ ದರ್ಶನ್, ಪವಿತ್ರಗೌಡ ,ಪ್ರದೂಷ್, ನಾಗರಾಜ್ ಹಾಗೂ ಲಕ್ಷ್ಮಣನನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದರು. ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಕೋರಮಂಗಲದಲ್ಲಿರುವ 64ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರ ಮನೆಗೆ ಕರೆದೊಯ್ದು, ಜಡ್ಜ್ ಮುಂದೆ ಹಾಜರುಪಡಿಸಿದರು. ಈ ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಪಡಿಸಿದ ಆದೇಶ ಪ್ರತಿ ನ್ಯಾಯಾಧೀಶರಿಗೆ ಪೊಲೀಸರು ಸಲ್ಲಿಸಿ, ಆದೇಶ ಪಾಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಳಿಕ ಆರೋಪಿಗಳ ಸರ್ಕಾರಿ ದಾಖಲೆಯನ್ನು ಜಡ್ಜ್ ಕೇಳಿ, ಪರಿಶೀಲಿಸಿದರು. ಈ ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದರು. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಇಂದು ಬೆಳಗ್ಗೆ (ಆ.14) ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿತ್ತು. ಜಾಮೀನು ರದ್ದು ಮಾಡುವಾಗ ನ್ಯಾಯಾಲಯ, ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶ ರವಾನಿಸಿತ್ತು. ಇನ್ನೂ ಆರೋಪಿಗಳ ಪರ ವಕೀಲರು ಸಮಯ ಕೇಳದ ಕಾರಣ ಇಂದೇ ಆರೋಪಿಗಳು ಶರಣಾಗ ಬೇಕಿತ್ತು.
2011ರಲ್ಲಿ ದರ್ಶನ್ ಜೈಲು ಪಾಲು
ಈ ಹಿಂದೆ ಸಹ ದರ್ಶನ್ ಎರಡು ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಮೊದಲನೆ ಬಾರಿ 2011ರಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ಮಾಡಿ ದರ್ಶನ್ ಸ್ವಲ್ಪ ದಿನಗಳ ಕಾಲ ಜೈಲುಪಾಲಾಗಿದ್ದರು. ಬಲ್ಲ ಮೂಲಗಳ ಪ್ರಕಾರ, ಅಂದು ಹಿರಿಯ ನಟ ಅಂಬರೀಶ್ ಮಧ್ಯಪ್ರವೇಶಿಸಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಮಧ್ಯೆ ರಾಜಿ ಮಾಡಿಸಿದ್ದರು ಎನ್ನಲಾಗಿತ್ತು.
ಇನ್ನೂ ಎರಡನೇ ಬಾರಿ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಮೊದಲು ಬಂಧನವಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ರಾಜಾತಿಥ್ಯದ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಬಳಿಕ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊಗೆ ಬಂದಿದ್ದರು. ಇದೀಗ ಜಾಮೀನು ರದ್ದಾದ ಬೆನ್ನಲ್ಲೇ ಮೂರನೇ ಬಾರಿಗೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್