ರೇಣುಕಾಸ್ವಾಮಿ ಕೊಲೆ ಕೇಸ್‌: ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ

Public TV
2 Min Read

– ಜೈಲು ಸೇರಿ 72 ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇಕೆ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಪರ ವಕೀಲರು ಜಾಮೀನಿಗಾಗಿ (Court Bail) ಸೋಮವಾರ (ಆ.19) ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್‌ 22ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸೆಬಾಸ್ಟಿಯನ್ ಸಿಸಿಎಚ್ 57ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾಗೌಡ ಜೈಲು ಸೇರಿ 72 ದಿನಗಳೇ ಕಳೆದಿವೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಪವಿತ್ರಾಗೌಡ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

ಪವಿತ್ರಾಗೆ ಜೈಲು ಏಕೆ?
ಕಳೆದ ಜೂನ್‌ 11ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಜೈಲುಪಾಲಾಗಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ13 ದೀಪಕ್, ಎ14 ಪ್ರದೋಶ್, ಎ16 ನಿಖಿಲ್ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ತನಿಖೆಯಲ್ಲಿ 200ಕ್ಕೂ ಅಧಿಕ ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸುವ ಹಂತದಲ್ಲಿದ್ದಾರೆ. ಇದನ್ನೂ ಓದಿ: ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

ಕೊಲೆ ಕೇಸ್‌ ಭೇದಿಸಿದ್ದು ಹೇಗೆ?
ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನೆಂದು ಆರೋಪಿಸಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಮತ್ತು ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್‌ ಮಾಡಿತ್ತು. ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‍ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ಮೋರಿ ಬಳಿ ಎಸೆಯಲಾಗಿತ್ತು. ಇದಾದ ನಂತರ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ವೇಳೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇರುವುದು ಬಯಲಾಗಿತ್ತು.

ನಂತರ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್‌ರನ್ನ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದರು. ಬಳಿಕ ಒಬ್ಬೊಬ್ಬರಂತೆ 17 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ – ಸಿಆರ್‌ಪಿಎಫ್‌ ಅಧಿಕಾರಿ ಹುತಾತ್ಮ

Share This Article