ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ ತನಿಖೆ ಭರದಿಂದ ಸಾಗಿದೆ. ಈ ಸಂಬಂಧ ಇಂದು ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟನಿಗೆ ವಿಚಾರಣೆಯ ಭೀತಿ ಎದುರಾಗಿದೆ.
ಹೌದು. ಸ್ಟೋನಿ ಬ್ರೂಕ್ ಪಬ್‍ನಲ್ಲಿ ಚಿಕ್ಕಣ್ಣ (Chikkanna) ಅಲ್ಲದೇ ಇನ್ನೊಬ್ಬ ನಟನಿದ್ದ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಚಿಕ್ಕಣ್ಣ, ದರ್ಶನ್ ಬಿಟ್ಟು ಮತ್ತೊಬ್ಬ ನಟ ಇದ್ದರು. ಪಾರ್ಟಿ ನಂತರ ಚಿಕ್ಕಣ್ಣ ಮತ್ತು ಆ ನಟ ಇಬ್ರೂ ಒಟ್ಟಿಗೆ ತೆರಳಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ನಟ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ಇದೀಗ ಆ ನಟನಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅಲ್ಲದೇ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ದರ್ಶನ್ ಊಟಕ್ಕೆ ಕರೆದಿದ್ರು ಹೋಗಿದ್ದೆ- ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಸಂಬಂಧ ಸ್ಟೋನಿ ಬ್ರೂಕ್ ಪಬ್‍ನಲ್ಲಿ (Stony Brook) ಚಿಕ್ಕಣ್ಣ ಇದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ಇಂದು ನಟನಿಗೆ ನೋಟಿಸ್ ಕೊಟ್ಟಿದ್ದರು. ಆದರೆ ನೋಟಿಸ್‍ಗೆ ಚಿಕ್ಕಣ್ಣ ಉತ್ತರಿಸಿರಲಿಲ್ಲ. ಬಳಿಕ ಸ್ಟೋನಿ ಬ್ರೂಕ್ ಪಬ್‍ನಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲು ತೆರಳಿದ್ದಾಗ ಚಿಕ್ಕಣ್ಣ ಅಲ್ಲಿದ್ದರು. ಹೀಗಾಗಿ ಅವರನ್ನು ಪೊಲೀಸರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದು ಸರಿಸುಮಾರು ಮೂರೂವರೆ ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿ ಕಳಿಸಿದ್ದಾರೆ.
ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಿಕ್ಕಣ್ಣ, ದರ್ಶನ್ ನನಗೆ ಸ್ನೇಹಿತ, ಹಾಗಾಗಿ ಊಟಕ್ಕೆ ಹೋಗಿದ್ದೆ. ಇವತ್ತು ಪೊಲೀಸರು ವಿಚಾರಣೆ ಕರೆದಿದ್ರು ಬಂದಿದ್ದೀನಿ. ಪ್ರಕರಣದ ತನಿಖೆ ನಡೀತಿದೆ. ಹೀಗಾಗಿ ಈಗ ನಾನು ಏನೂ ಹೇಳಲ್ಲ ಎಂದು ಹೇಳಿ ಹೊರಟರು.


