‘ಎಣ್ಣೆ’ ಸಚಿವರ ಹೇಳಿಕೆಗೆ ರೇಣುಕಾಚಾರ್ಯ ಆಕ್ರೋಶ

Public TV
1 Min Read

ದಾವಣಗೆರೆ: ಮನೆ ಬಾಗಿಲಿಗೆ ಮದ್ಯ ವಿತರಣೆ ಮಾಡುವುದಾಗಿ ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನ್ಯಾಮತಿಯ ದೊಡ್ಡಯತ್ತಿನಹಳ್ಳಿಯಲ್ಲಿ ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಅಬಕಾರಿ ಸಚಿವ ನಾಗೇಶ್ ಹೇಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮನೆ ಮನೆಗೆ ಮದ್ಯ ಹಾಗೂ ಮೊಬೈಲ್ ಬಾರ್ ಗಳ ಬಗ್ಗೆ ಮಾತನಾಡಬಾರದಿತ್ತು. ನಿಮ್ಮ ಈ ರೀತಿಯ ಹೇಳಿಕೆಯಿಂದ ಸಿಎಂ ಬಿಎಸ್‍ವೈ ಅವರ ಸರ್ಕಾರ ಹಾಗೂ ಬಿಜೆಪಿ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವರಾಗಿ ಸರ್ಕಾರದ ಅದಾಯವನ್ನು ಹೆಚ್ಚಿಸಬೇಕು ಎಂದರೆ ಮೊದಲು ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿಯನ್ನು ನಿಲ್ಲಿಸಿ. ಆಗ ಸರ್ಕಾರಕ್ಕೆ ತಾನಾಗಿಯೇ ಆದಾಯ ಬರುತ್ತದೆ. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡಬಾರದು. ನಾನು ಅಬಕಾರಿ ಸಚಿವನಾಗಿದ್ದ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಕ್ರಮ ಮದ್ಯದ ತಯಾರಿಕೆಯನ್ನು ತಡೆದು ಕಳ್ಳಭಟ್ಟಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮವಹಿಸಿದ್ದೆ. ನೀವು ಹೇಳಿರುವಂತೆ ಕಳ್ಳಭಟ್ಟಿ ತಯಾರಿಕೆ ತಡೆಯುವ ಬಗ್ಗೆ ಗಮನಹರಿಸಿ. ಈ ಬಗ್ಗೆ ನಿಮ್ಮನ್ನು ಸಂಪರ್ಕ ಮಾಡಿ ಮಾತನಾಡಲು ಪ್ರಯತ್ನಿಸಿದ್ದೆ. ಆದರೆ ಸಂಪರ್ಕ ಮಾಡಲು ಆಗಲಿಲ್ಲ. ಆದ್ದರಿಂದ ಇಂತಹ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಬಿಎಸ್ ಯಡಿಯೂರಪ್ಪ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇದ್ದು, ಜನರ ಅಭಿವೃದ್ಧಿಗೆ ಬೇಕಾದ ಒಳ್ಳೆಯ ಕಾರ್ಯಕ್ರಮ ಬಗ್ಗೆ ಗಮನ ನೀಡೋಣ. ರೈತರ ಅಭಿವೃದ್ಧಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ನೀರಿನ ಸಮಸ್ಯೆಗಳನ್ನು ಬಗೆಹರಿಸುವತ್ತ ಕಾರ್ಯ ನಿರ್ವಹಿಸೋಣ. ನಿಮ್ಮ ಬಗ್ಗೆ ಗೌರವವಿದ್ದು, ಯಾವುದೇ ಅವಿಶ್ವಾಸ ಇಲ್ಲ. ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *