ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

Public TV
2 Min Read

– ಮೊಬೈಲ್ ಬಳಸುತ್ತಿರಲಿಲ್ಲ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ
– ಅಂಜಲಿ-ವಿಶ್ವ ಪ್ರೀತಿಸುತ್ತಿದ್ದರಂತೆ – ಪೊಲೀಸ್ ಆಯುಕ್ತರ ಸ್ಫೋಟಕ ಹೇಳಿಕೆ

ಹುಬ್ಬಳ್ಳಿ: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ (Anjali Murder Case) ಆರೋಪಿ ವಿಶ್ವನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಆರೋಪಿ ವಿಶ್ವ ಗಂಭೀರ ಗಾಯಗೊಂಡಿರುವ ಹಿನ್ನೆಲೆ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಕರಣದ ಕುರಿತು ಮಾತನಾಡಿರುವ ಹು-ಧಾ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ (Renuka Sukumar), ಆರೋಪಿ ವಿಶ್ವನನ್ನ ಪತ್ತೆಹಚ್ಚುವುದಕ್ಕಾಗಿ 8 ತಂಡಗಳನ್ನು ರಚನೆ ಮಾಡಿದ್ದೆವು. ಗುರುವಾರ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ಸೆರೆ ಹಿಡಿಯುವ ವೇಳೆ ಟ್ರೈನ್‌ನಿಂದ ಬಿದ್ದು ಮುಖ ಮತ್ತು ತಲೆಯ ಭಾಗಕ್ಕೆ ಭಾರೀ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಹೇಗಿತ್ತು ಪೊಲೀಸರ ತನಿಖೆ?
ವಿಶ್ವ ಕೊಲೆ ಮಾಡಿದ ಬಳಿಕ ಹುಬ್ಬಳ್ಳಿಯಿಂದ ದಾವಣೆಗೆರೆ ಬಸ್ ಹತ್ತಿದ್ದಾನೆ. ಮಾರ್ಗಮಧ್ಯೆ ಬಸ್ ಇಳಿದು, ಹಾವೇರಿಗೆ ಹೋಗಿದ್ದಾನೆ. ಅಲ್ಲಿಂದ ಪುನಃ ಮೈಸೂರು ಬಸ್ ಹತ್ತಿದ್ದ, ಅಲ್ಲಿಂದಲೂ ಇಳಿದು, ವಿಶ್ವಮಾನವ ಟ್ರೈನ್‌ನಲ್ಲಿ (VishwaManava Train) ಮೈಸೂರಿನ ಕಡೆಗೆ ಹೊರಟಿದ್ದ. ಅಲ್ಲಿಂದ ಗೋವಾ, ಮಹಾರಾಷ್ಟ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ ಅನ್ನೋ ಮಾಹಿತಿಯಿದೆ. ಆರೋಪಿ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ಬಳಸುತ್ತಿರಲಿಲ್ಲ. ತಂದೆ-ತಾಯಿ ಸ್ನೇಹಿತರೊಟ್ಟಿಗೂ ಸಂಪರ್ಕದಲ್ಲಿ ಇರಲಿಲ್ಲ. ಎಲ್ಲಿ ಕೆಲಸಕ್ಕೆ ಹೋಗುತ್ತಿದ್ದನೋ ಅಲ್ಲಿಯೇ ಉಳಿದುಕೊಳ್ಳುತ್ತಿದ್ದ. ಆದ್ದರಿಂದ ಹುಡುಕಾಟ ಸವಾಲಾಗಿತ್ತು. 8 ತಂಡಗಳನ್ನು ರಚಿಸಿ, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿತ್ತು. ಬಳಿಕ ರೈಲ್ವೆ ಪೊಲೀಸರ ಸಹಾಯದಿಂದ ಸೆರೆ ಹಿಡಿಯಲಾಯಿತು. ಬೆಳಗ್ಗೆ 4:30ರ ವೇಳೆಗೆ ಆರೋಪಿಯನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಸದ್ಯ ಆರೋಪಿಗೆ ತಲೆ ಮತ್ತು ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ವೈದ್ಯರು ಉನ್ನತ ಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣ ಚಿಕಿತ್ಸೆ ಮುಗಿಸಿದ ನಂತರ ವಿಚಾರಣೆಗೆ ಪಡೆಯುತ್ತೇವೆ. ವಿಶ್ವನ ಮೇಲೆ ಬೈಕ್ ಕಳ್ಳತನದ ವಿಚಾರದಲ್ಲಿ 4 ಪ್ರಕರಣಗಳು ದಾಖಲಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಅವರಿಬ್ಬರು ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಹುಡಗನ ಫೋನ್ ಕರೆಗಳನ್ನು ಅಂಜಲಿ ಬ್ಲಾಕ್ ಮಾಡಿದ್ದಳು ಅಂತಾ ಹೇಳಿದ್ದಾನೆ. ಅವನಿಗೆ ಪ್ರಜ್ಞೆ ಬಂದ ನಂತರ ಮುಂದಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಯಾವುದೇ ಸಮಸ್ಯೆಯಿದ್ದರೂ ತಿಳಿಸಿ:
ಇದೇ ವೇಳೆ ಪೊಲೀಸ್ ಆಯುಕ್ತರು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಿದ್ದರೂ ಸಹಾಯವಾಣಿ ದೂ.ಸಂ. 112ಗೆ ಕರೆ ಮಾಡಿ. ಕರೆ ಮಾಡಿದ 20 ನಿಮಿಷಗಳಲ್ಲೇ ನಮ್ಮ ಪೊಲೀಸರು ಅಲ್ಲಿಗೆ ಬರಲಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಅಭಯ ನೀಡಿದ್ದಾರೆ.

Share This Article