ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ನಿಧನ

Public TV
2 Min Read

ಬೆಂಗಳೂರು: ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಭಾನುವಾರ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಇವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi Kannada University) ಸುಮಾರು 28 ವರ್ಷ ಪ್ರಾಧ್ಯಾಪಕರಾಗಿದ್ದ ಮೊಗಳ್ಳಿ ಗಣೇಶ್ (Mogalli Ganesh) ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು.

ಪ್ರಬಲ ದಲಿತ (Dalit) ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗಿ ಹೋಗುತ್ತಿದ್ದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

 

ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ ಅವರ ಬೃಹತ್ ಕಾದಂಬರಿ. ‘ಕಥನ’ ಅವರ ಪ್ರಬಂಧ ಸಂಕಲನ. ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.

ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡದ ಖ್ಯಾತ ಕಥೆಗಾರ ,ವಿಮರ್ಶಕ ಡಾ. ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಮೊಗಳ್ಳಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನ ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Share This Article