ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ್ದು ಅಕ್ಷಮ್ಯ: ಜೆಡಿಎಸ್ ಆಕ್ರೋಶ

Public TV
2 Min Read

ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆ (KPSC Exam) ವೇಳೆ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿರುವ ಪರೀಕ್ಷೆ ವ್ಯವಸ್ಥೆ ಮತ್ತು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಜೆಡಿಎಸ್ (JDS) ಇಂತಹ ಕೃತ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.

ಪೋಸ್ಟ್‌ನಲ್ಲೇನಿದೆ?
ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ (Mangalasutra), ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ. ಇದು ಸ್ತ್ರೀಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ. ನಾವು ಕರ್ನಾಟಕದಲ್ಲಿ ಇದ್ದೇವೆಯೋ? ಅಥವಾ ಇನ್ನೆಲ್ಲಾದರೂ ಇದ್ದೇವೆಯೋ?

ಕಲಬುರಗಿಯಲ್ಲಿ (Kalaburagi) ಭಾನುವಾರ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸ್ತ್ರೀಯರಿಗೆ ಘೋರ ಅಪಮಾನ ಎಸಗಿದ್ದು ಅತ್ಯಂತ ಖಂಡನೀಯ. ಇಂಡಿಯಾ ಎಂದು ಜಪಿಸುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭಾರತದ ಸಂಸ್ಕೃತಿಗೆ ಸಿಕ್ಕ ಗೌರವ ಇದು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಿರ್ನಾಮ ಮಾಡುವ ಕುಕೃತ್ಯ ಅವರಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ಗೃಹಲಕ್ಷ್ಮಿ ಎನ್ನುವ ರಾಜ್ಯ ಸರ್ಕಾರ, ಇನ್ನೊಂದೆಡೆ ಅದೇ ಗೃಹಲಕ್ಷ್ಮಿಯರ ಸೌಭಾಗ್ಯ ಮತ್ತು ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಕರ್ನಾಟಕ ಮಾದರಿ ಎಂದರೆ ತಾಯಂದಿರ ಮುತ್ತೈದೆತನಕ್ಕೇ ಕುತ್ತು ತರುವುದಾ? ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

ಇಷ್ಟಕ್ಕೂ ಪರೀಕ್ಷಾ ಸಿಬ್ಬಂದಿಗೆ ಮಹಿಳಾ ಅಭ್ಯರ್ಥಿಗಳ ತಾಳಿ, ಕಾಲುಂಗುರ ತೆಗೆಸುವಂತೆ ಆದೇಶ ಕೊಟ್ಟವರು ಯಾರು? ಅವರಿಗೆ ಅಷ್ಟೊಂದು ಸೂಕ್ಷ್ಮಪ್ರಜ್ಞೆಯ ಕೊರತೆಯೇ? ಪರೀಕ್ಷೆಗೆ ಮೊದಲೇ ಆ ಮಹಿಳೆಯರಿಗೆ ಅದೆಷ್ಟು ಮಾನಸಿಕ ಆಘಾತ ಉಂಟಾಗುತ್ತದೆ ಎಂಬ ಅರಿವು ಬೇಡವೇ? ಪರೀಕ್ಷಾ ನಿಯಮಗಳ ಪಟ್ಟಿಯಲ್ಲಿ ಕಾಲುಂಗುರ, ಮಂಗಳಸೂತ್ರ ತೆಗೆಯಬೇಕು ಎನ್ನುವ ಸೂಚನೆಯೇ ಇರಲಿಲ್ಲ ಎನ್ನುತ್ತಾರೆ ಪರೀಕ್ಷಾರ್ಥಿಗಳು. ಹಾಗಾದರೆ ಪರೀಕ್ಷಾ ಕೇಂದ್ರಕ್ಕೆ ಬಂದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರವನ್ನು ಬಲವಂತವಾಗಿ ತೆಗೆಸಿದ್ದು ದುರ್ನಡತೆಯ ಪರಮಾವಧಿ.

ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರ ಕೂಡಲೇ ನೊಂದ ಮಹಿಳೆಯರಿಗೆ ಕ್ಷಮೆ ಯಾಚಿಸಬೇಕು ಹಾಗೂ ಇಂತಹ ಆಘಾತಕಾರಿ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಮತ್ತೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್ ಸರ್ಕಾರವನ್ನು ಆಗ್ರಹಿಸಿದೆ. ಇದನ್ನೂ ಓದಿ: ಬಾಗಿಲಿಲ್ಲದ ದೇವಾಲಯಕ್ಕೆ ನುಗ್ಗಿ ಕಾಣಿಕೆ ಡಬ್ಬಿ, 100 ಘಂಟೆಗಳನ್ನು ದೋಚಿದ ಕಳ್ಳರು

Share This Article