ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

Public TV
3 Min Read

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದು ಹಾಕಲು ಸಚಿವರ ಸಮಿತಿ (Group of Ministers) ಒಪ್ಪಿಗೆ ನೀಡಿದೆ.

 ಸಚಿವರ ಸಮಿತಿಯ ಸಂಚಾಲಕ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರತಿಕ್ರಿಯಿಸಿ ಕೇಂದ್ರವು ಮಾಡಿದ ಪ್ರಸ್ತಾವನೆಗಳ ಕುರಿತು ಕೆಲ ರಾಜ್ಯಗಳು ಸಲಹೆಗಳನ್ನು ನೀಡಿವೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ (GST Council) ಇವುಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಸಚಿವರ ಸಮಿತಿ ಒಪ್ಪಿಗೆ ನೀಡದ ಬಳಿಕ  ಪ್ರಸ್ತಾಪ  ಅಂತಿಮವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಮತ್ತು ಎಲ್ಲಾ ರಾಜ್ಯಗಳ ಮಂತ್ರಿಗಳನ್ನು ಸದಸ್ಯರನ್ನಾಗಿ ಹೊಂದಿರುವ ಜಿಎಸ್‌ಟಿ ಮಂಡಳಿಗೆ ಹೋಗಲಿದೆ. ಈ ಮಂಡಳಿಯೂ ರಾಜ್ಯಗಳ ಪಾಲು ಮತ್ತು ಆದಾಯ ನಷ್ಟಕ್ಕೆ ಪರಿಹಾರದ ಕುರಿತಾದ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರತಿಕ್ರಿಯೆಯನ್ನು ಪರಿಗಣಿಸುತ್ತದೆ.

 

ಪಶ್ಚಿಮ ಬಂಗಾಳ ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, ರಾಜ್ಯಗಳು ಆದಾಯವನ್ನು ಕಳೆದುಕೊಳ್ಳುವುದರಿಂದ ನಮಗೆ ಹೇಗೆ ಪರಿಹಾರ ನೀಡಲಾಗುವುದು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ನಾನು ಸಭೆಯಲ್ಲಿ ಎತ್ತಿದ್ದೇನೆ. ಎಷ್ಟು ಪ್ರಮಾಣದ ಆದಾಯ ನಷ್ಟವಾಗಬಹುದು ಎನ್ನುವುದು ನಮಗೆ ತಿಳಿದಿಲ್ಲ. ಈ ವಿವರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ತಿಳಿಯಬಹುದು ಎಂದು ಅವರು ತಿಳಿಸಿದರು.

ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ನೀಡಲಾದ ಪ್ರಸ್ತಾಪದಲ್ಲಿ ಎಷ್ಟು ನಷ್ಟ ಉಂಟಾಗುತ್ತಿದೆ ಎಂಬುದನ್ನು ಉಲ್ಲೇಖಿಸಲಾಗಿಲ್ಲ. ಆದರೆ ಸಾಮಾನ್ಯ ಜನರು ಇದರಿಂದ ಪ್ರಯೋಜನ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.  ಇದನ್ನೂ ಓದಿ: 3 ವರ್ಷದಿಂದ ಅಶ್ಲೀಲ ಮೆಸೇಜ್‌ ಕಳಿಸ್ತಿದ್ದಾರೆ, ಹೋಟೆಲ್‌ಗೆ ಕರೀತಿದ್ದಾರೆ ರಾಜಕಾರಣಿ ವಿರುದ್ಧ ನಟಿ ರಿನಿ ಜಾರ್ಜ್ ಆರೋಪ

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ನರೇಂದ್ರ ಮೋದಿ (Narendra Modi) ಜಿಎಸ್‌ಟಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ದೀಪಾವಳಿಗೆ ಡಬಲ್‌ ಗಿಫ್ಟ್‌ ಸಿಗಲಿದೆ ಎಂದು ಹೇಳಿದ್ದರು.

ಪ್ರಸ್ತುತ ಈಗ ಅಗತ್ಯ ವಸ್ತುಗಳಿಗೆ 0%, ಮೂಲಭೂತ ಅಗತ್ಯಗಳಿಗೆ ಬೇಕಾದ ವಸ್ತುಗಳಿಗೆ 5%, ಪ್ರಮಾಣಿತ ಸರಕುಗಳಿಗೆ 12%, ಹೆಚ್ಚಿನ ಗ್ರಾಹಕ ಉತ್ಪನ್ನಗಳಿಗೆ 18%, ಐಷಾರಾಮಿ ಸರಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿದೆ.  ಇದನ್ನೂ ಓದಿ: ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

ಸದ್ಯ ಈಗ ಇರುವ ಸ್ಲ್ಯಾಬ್‌ಗಳ ಪೈಕಿ 5% ಮತ್ತು 18% ಸ್ಲ್ಯಾಬ್‌ ಮಾತ್ರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ 28% ನಲ್ಲಿರುವ 90% ರಷ್ಟು ವಸ್ತುಗಳನ್ನು 18%ಕ್ಕೆ ವರ್ಗಾಯಿಸಲಾಗುತ್ತದೆ, 12% ರಷ್ಟು ಸ್ಲ್ಯಾಬ್‌ನಲ್ಲಿರುವ 99% ರಷ್ಟು ವಸ್ತುಗಳನ್ನು 5% ಸ್ಲ್ಯಾಬ್‌ಗೆ ವರ್ಗಾಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಐಷಾರಾಮಿ ಸರಕುಗಳಿಗೆ 40% ದರ ಅನ್ವಯಿಸುತ್ತದೆ. ಇದರಲ್ಲಿ ತಂಬಾಕು, ಗುಟ್ಕಾ ಮತ್ತು ಸಿಗರೇಟ್ ಸೇರಿವೆ. ಸರ್ಕಾರಿ ಮೂಲಗಳ ಪ್ರಕಾರ 40% ವರ್ಗವು ಕೇವಲ 5-7 ವಸ್ತುಗಳನ್ನು ಮಾತ್ರ ಹೊಂದಿರುತ್ತದೆ. ರೆಫ್ರಿಜರೇಟರ್, ಎಸಿ, ವಾಷಿಂಗ್‌ ಮಷೀನ್‌ನಂತ ವಸ್ತುಗಳನ್ನು ಇದರಿಂದ ಹೊರಗಿಡಲಾಗುತ್ತದೆ.

ಒಟ್ಟು ಜಿಎಸ್‌ಟಿ ಆದಾಯದ ಪೈಕಿ 67% ಆದಾಯ 18% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿದೆ. 11% ಮತ್ತು 5% ಆದಾಯ ಕ್ರಮವಾಗಿ 28% ಮತ್ತು 12% ಬಂದರೆ, 12% ಆದಾಯ 5% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ತೆರಿಗೆ ಪರಿಷ್ಕರಣೆಯಾದರೂ ಪೆಟ್ರೋಲ್‌, ಡೀಸೆಲ್‌ ದರಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ.

Share This Article