ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

Public TV
2 Min Read

– ಆದಿಚುಂಚನಗಿರಿ ಶ್ರೀಗಳ ಪರಿಸರ ಕಾಳಜಿಗೆ ಪ್ರಶಂಸೆ

ಮಂಡ್ಯ: ಆಧುನೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಹಾಗೂ ದೇಶದಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಮಾನವನ ಆರೋಗ್ಯವೂ ಸಹ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಮರಗಳನ್ನು ಕಡಿಯದೇ ಅಭಿವೃದ್ಧಿ ಮಾಡುವುದು ಹೇಗೆ ಎಂದು ಆದಿಚುಂಚನಗಿರಿಯ ಶ್ರೀಗಳು ನಿರೂಪಿಸಿದ್ದಾರೆ.

ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ ಹಾಗೂ ಆಧುನಿಕತೆಯ ಹೆಸರನ್ನು ಹೇಳಿಕೊಂಡು ಸರ್ಕಾರ ಹಾಗೂ ಖಾಸಗಿಯವರು ಲಕ್ಷಾಂತರ ಮರಗಳನ್ನು ಮಾರಣ ಹೋಮ ಮಾಡಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಮರಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳು ಮರಗಳನ್ನು ಕಡಿಯದೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಸಮಾಜಕ್ಕೆ ತಿಳಿಸಲು ಮುಂದಾಗಿದ್ದಾರೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರ ಕಡಿಯದೆ ಅವುಗಳನ್ನು ಸಂರಕ್ಷಣೆ ಮಾಡುವ ಮೂಲಕ ಸಾಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಬಿಜಿ ನಗರದ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಎದುರು ಇದೀಗ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣ ಮಾಡುವ ಜಾಗದಲ್ಲಿ 250 ಕ್ಕೂ ಹೆಚ್ಚು ಬೆಳೆದು ನಿಂತಿರುವ ಮರಗಳು ಇವೆ. ಈ ಮರಗಳನ್ನು ಏನು ಮಾಡುವುದು ಎಂದು ಯೋಚನೆ ಮಾಡುವಾಗ ಶ್ರೀಗಳಿಗೆ ಹೊಳೆದಿರುವುದು ಮರಗಳನ್ನು ಸ್ಥಳಾಂತರ ಮಾಡುವ ಪ್ಲಾನ್.

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬಡವರಿಗೆ ಉಪಯೋಗವಾಗಬೇಕು ಎಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದು, ಅಲ್ಲಿ ಬೆಳೆದು ನಿಂತಿರುವ ಮರಗಳ ಜೀವವನ್ನು ಕಾಪಾಡಿದ್ದಾರೆ. ಈ ಮರಗಳನ್ನು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಪೋಷಣೆ ಮಾಡಿದ್ದರು. ಆದ್ದರಿಂದ ಈ ಮರಗಳನ್ನು ಕಡಿಯುವುದು ಬೇಡಾ, ಈ ಮರಗಳನ್ನು ಸ್ಥಳಾಂತರ ಮಾಡೋಣ ಎಂದು ಹೇಳಿದ್ದಾರೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರು ಶ್ರೀಗಳು, ಯಂತ್ರದ ಸಹಾಯದಿಂದ ಮರಕ್ಕೆ ಪೆಟ್ಟು ಆಗದಂತೆ ಇಡೀ ಮರವನ್ನು ಬೇರು ಸಹಿತ ಕಿತ್ತು ಎರಡು ಎಕರೆ ಪ್ರದೇಶದಲ್ಲಿ ಪ್ಲಾಂಟ್ ಮಾಡಿಸುತ್ತಿದ್ದಾರೆ.

ಆದಿಚುಂಚನಗಿರಿ ಶ್ರೀಗಳ ಈ ಪರಿಸರ ಕಾಳಜಿಗೆ ಎಲ್ಲರೂ ಸಹ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಹಾಗೂ ಖಾಸಗಿ ಅವರು ಮರಗಳ ಮಾರಣಹೋಮ ಮಾಡದೇ ಶ್ರೀಗಳ ಹಾದಿ ತುಳಿದು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *