ಆಮಿಷ ಒಡ್ಡಿ ಮತಾಂತರ – ಹುಬ್ಬಳ್ಳಿಯಲ್ಲಿ ರಾತ್ರಿ ಪ್ರತಿಭಟನೆ

Public TV
3 Min Read

– ತಮ್ಮದೇ ಸರ್ಕಾರದ ವಿರುದ್ಧ ಶಾಸಕ ಬೆಲ್ಲದ್ ತೀವ್ರ ಅಸಮಾಧಾನ

ಹುಬ್ಬಳ್ಳಿ: ಭೈರಿದೇವರ ಕೊಪ್ಪದ ಆಲ್ ಸಿಂಬಲ್ ಆಫ್ ಗಾಡ್ ಚರ್ಚ್‍ನಲ್ಲಿ ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗ್ತಿದೆ ಅಂತ ಆರೋಪಿಸಿ ಹಿಂದೂಪರ ಸಂಘಟನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಭಾನುವಾರ ರಾತ್ರಿ ರಸ್ತೆ ಸಂಚಾರವನ್ನ ತಡೆದು ಪ್ರತಿಭಟಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತು ಪಾದ್ರಿಯ ನಡುವೆ ಮಾತಿನ ಚಕಮಕಿ ನಡೆದಿದೆ. ನವನಗರ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ 2 ಕೋಮಿನವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಳ್ಳದೇ ಪಾದ್ರಿಯನ್ನ ಬಿಟ್ಟು ಕಳುಹಿಸಿದರು.

ಇದರಿಂದ ಕೆರಳಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನವನಗರ ಠಾಣೆ ಮುಂದೆ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಶಾಸಕ ಅರವಿಂದ ಬೆಲ್ಲದ ಸ್ಥಳಕ್ಕಾಗಮಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ್ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದಾಗಲೂ ಒಬ್ಬ ಆರೋಪಿ ಬಂಧಿಸುವಂತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು ನಮ್ಮ ದೌರ್ಭಾಗ್ಯ ಅಂತ ಶಾಸಕ ಅರವಿಂದ ಬೆಲ್ಲದ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವ್ಯವಸ್ಥೆ ವಿರುದ್ಧ ಬೇಸರಗೊಂಡರು.

ಆಗಿದ್ದೇನು?
ಭೈರಿದೇವರಕೊಪ್ಪದ ಬಳಿಯಿರುವ ಪ್ರೇಯರ್ ಹೌಸ್ ಫಾರ್ ಆಲ್ ಪೀಪಲ್ ಪ್ರಾರ್ಥನಾ ಮಂದಿರದಲ್ಲಿ ಬೆಳಗ್ಗೆ ಸೋಮು ಅವರಾಧಿ ಎಂಬಾತ ಮತಾಂತರಕ್ಕೆ ಯತ್ನಿಸುತ್ತಿದ್ದಾನೆ ಎಂಬ ಸುದ್ದಿ ಹರಡಿತು. ಇದರಿಂದ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಲ್ಲಿಗೆ ತೆರಳಿ ʼಓಂ ನಮಃ ಶಿವಾಯ’ ಪಠಿಸಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದೆ. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡು ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.

ಸೋಮು ಕೂಡ ತಮ್ಮ ಬೆಂಬಲಿಗರನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ತಮ್ಮವರ ಮೇಲೆ ಹಲ್ಲೆ ನಡೆದಿದೆ ಎಂದು 108ಕ್ಕೆ ಕರೆ ಮಾಡಿ ಅಲ್ಲಿಂದ ಅಂಬುಲೆನ್ಸ್‌ ಮೂಲಕ ತೆರಳಿದ್ದಾರೆ. ಈ ವೇಳೆ ಮತಾಂತರಿ ಸೋಮು ಅವರಾದಿ ಪೊಲೀಸರ ಎದುರೆ ಪರಾರಿ ಆಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಜಯತೀರ್ಥ ಕಟ್ಟಿ ಹಾಗೂ ಕಾರ್ಯಕರ್ತರು ಠಾಣೆಯೆದುರು ಸಂಜೆಯವರೆಗೆ ಪ್ರತಿಭಟನೆ ನಡೆಸಿದ್ದಾರೆ.  ಇದನ್ನೂ ಓದಿ: ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

ಪ್ರಕರಣ ದಾಖಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಬಂಧಿಸಿಲ್ಲ ಎಂದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟರು. ನೂರಾರು ಜನ ಸೇರಿ ನವನಗರ ಕ್ಯಾನ್ಸರ್ ಆಸ್ಪತ್ರೆ ಎದುರು ಹು-ಧಾ ರಸ್ತಾ ರೋಖೋ ನಡೆಸಿದರು. ಈ ವೇಳೆ ಸುಮಾರು 2 ಕಿಮೀ ವರೆಗೆ ಸಂಚಾರ ಸ್ಥಗಿತಗೊಂಡಿತ್ತು.

ಆರ್‌ಎಸ್‌ಎಸ್ ಧರ್ಮಜಾಗರಣ ಸಂಯೋಜಕ ಸುನೀಲ್ ಚಿಲ್ಲಾಳ ಮಾತನಾಡಿ, ಸೋಮು ಅವರಾದಿ ಕ್ರಿಶ್ಚಿಯನ್ ಧರ್ಮದಿಂದ ಪಾಸ್ಟರ್ ಎಂದು ನೇಮಕಗೊಂಡಿದ್ದಾನೆ. ಈತ ಈಗಾಗಲೇ ನೂರಾರು ಜನರನ್ನು ಮತಾಂತರ ಮಾಡಿದ್ದಾನೆ. ಸರ್ವಧರ್ಮ ಪ್ರಾರ್ಥನೆಗೆ ಎಂದು ಕರೆದು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ, ಹಿಂದೂ ಧರ್ಮ ಬಿಡುವಂತೆ ತೊಂದರೆ ನೀಡುತ್ತಾನೆ ಎಂದು ದೂರಿದರು.

ಪೊಲೀಸ್ ಠಾಣೆ ವೇಳೆ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಧಾರವಾಡ ಜಿಲ್ಲೆಯಲ್ಲೂ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಮತಾಂತರ ತಡೆ ಕಠಿಣ ಕಾನೂನು ಜಾರಿಗಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಕಾಯ್ದೆ ರೂಪುರೇಷೆ ಸಂಬಂಧಿಸಿದಂತೆ ಹಿರಿಯ ವಕೀಲರ ಸಂಪರ್ಕಿಸಿದ್ದೇವೆ. ಅದರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದೇವೆ. ಈವರೆಗೆ ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ನಮ್ಮ ಕಾರ್ಯಕರ್ತರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಸೂಕ್ತ ಕ್ರಮಗಳನ್ನು ಜರುಗಿಸಬೇಕೆಂದು ಪೊಲೀಸರ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಘಟನೆಗೆ ಸಂಬಂಧಿಸಿ ವಿಶ್ವನಾಥ ಬುದೂರ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಾರೆ. ನನಗೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆದರೆ ಸಾಕಷ್ಟು ಸಂಪತ್ತು, ನೌಕರಿ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಜಾತಿನಿಂದನೆ ಹಾಗೂ ಮತಾಂತರ ನಿರ್ಬಂಧ ಕಾನೂನು ಅಡಿ ಪ್ರಕರಣ ದಾಖಲಾಗಿದೆ.

ಸೋಮು ಅವರಾದಿ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಪಿ ಸೋಮು, ನಾನು ಲಿಂಗಾಯತ. ಆದರೆ ಏಸುವನ್ನು ನಂಬುತ್ತೇನೆ. ನಾವು ಯಾವುದೇ ಮತಾಂತರ ಮಾಡಲು ಮುಂದಾಗಿಲ್ಲ. ವಿಶ್ವನಾಥ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ನಾಳೆ ಮುಸ್ಲಿಮ್‌ ಧರ್ಮದವರು ಇಷ್ಟಪಟ್ಟರೆ ಅಲ್ಲಿಗೆ ಹೋಗಿಯೂ ಪ್ರಾರ್ಥನೆ ಮಾಡುತ್ತೇನೆ. ನನ್ನ ಮೇಲಿರುವ ಆರೋಪ ಸುಳ್ಳು. ಪೊಲೀಸ್ ಠಾಣೆಯ ಬಳಿಯೇ ನಮ್ಮವರ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಕೂಡ ನಮ್ಮವರ ವಕೀಲರ ಜೊತೆ ಮಾತನಾಡಿದ್ದು, ಪ್ರತಿಯಾಗಿ ಕೇಸ್ ದಾಖಲಿಸುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *