ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸ್ಪರ್ಧೆ – ಶೀಘ್ರವೇ ಜಿಯೋ ಮಾರ್ಟ್ ಆರಂಭ, ಉಚಿತ ಡೆಲಿವರಿ

Public TV
2 Min Read

ಮುಂಬೈ : ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋ ಶೀಘ್ರದಲ್ಲೇ ‘ಜಿಯೋ ಮಾರ್ಟ್’ ಆರಂಭಿಸುವ ಮೂಲಕ ಇ ಕಾಮರ್ಸ್ ಉದ್ಯಮಕ್ಕೆ ಕಾಲಿಡಲಿದೆ. ಮುಂಬೈನಲ್ಲಿ ಇ ಕಾಮರ್ಸ್ ಸಂಸ್ಥೆ ಆರಂಭಿಸಿ ಫ್ಲಿಪ್‍ಕಾರ್ಟ್ ಮತ್ತು ಅಮೇಜಾನ್ ಕಂಪನಿಗಳಿಗೆ ಸವಾಲೊಡ್ಡಲು ಜಿಯೋ ಸಿದ್ಧವಾಗಿದೆ.

ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಇಷ್ಟು ದಿನ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಕಂಪನಿ ಈಗ ಇ ಕಾಮರ್ಸ್ ವಲಯದಲ್ಲೂ ಆಫರ್ ಗಳನ್ನು ಬಿಡುವ ಮೂಲಕ ಹೊಸ ಇತಿಹಾಸ ಬರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಪ್ರಾಯೋಗಿಕವಾಗಿ ಹೊಸ ಮುಂಬೈ, ಥಾಣೆ ಮತ್ತು ಕಲ್ಯಾಣ್‍ನಲ್ಲಿ ಜಿಯೋಮಾರ್ಟ್ ಆರಂಭವಾಗಲಿದೆ. ಈಗಾಗಲೇ ಪ್ರಚಾರ ಆರಂಭಗೊಂಡಿದ್ದು ಮುಂಬೈನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್ ಆರಂಭಿಸುವ ಜಾಹೀರಾತು ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರಮೇಣ ಭಾರತಾದ್ಯಂತ ವಿಸ್ತರಿಸಲು ಜಿಯೋ ಮುಂದಾಗುತ್ತಿದೆ.

ರಿಲಯನ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷದ ಅಗಸ್ಟ್ ನಲ್ಲಿ ನಡೆದ 42ನೇ ವಾರ್ಷಿಕ ಸಭೆಯಲ್ಲಿ ಇ-ಕಾಮರ್ಸ್ ಉದ್ಯಮವನ್ನು ಹೊಸ ವಾಣಿಜ್ಯ ಉಪಕ್ರಮ ಎಂದು ಕರೆಯುವ ಮೂಲಕ ಜಿಯೋ ಮಾರ್ಟ್ ಆರಂಭಿಸುವ ಸುಳಿವು ನೀಡಿದ್ದರು. ಮೂರು ಕೋಟಿ ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ದೇಶದ 20 ಕೋಟಿ ಮನೆಗಳೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.

ತನ್ನ ಇ-ಕಾಮರ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಿಲಯನ್ಸ್ ರಿಟೇಲ್ ಜಿಯೋಮಾರ್ಟ್‍ಗಾಗಿ ಪೂರ್ವ ನೋಂದಣಿಗಳಿಗೆ ಆಹ್ವಾನಿಸಿದೆ. ಈ ಹೊಸ ಉದ್ಯಮವು 50 ಸಾವಿರಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳಿಗೆ ಬಂಡವಾಳ ನೀಡಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆ ಮತ್ತು ಉಚಿತ ಡೆಲಿವರಿಗೆ ಹೆಚ್ಚು ಆದ್ಯತೆ ನೀಡಿದ್ದು ಉತ್ಪನ್ನಗಳು ವಾಪಸ್ ಆಗದ ರೀತಿಯಲ್ಲಿ ಎಕ್ಸ್‍ಪ್ರೆಸ್ ಡೆಲಿವರಿ ಸೇವೆಯನ್ನ ಗ್ರಾಹಕರಿಗೆ ಒದಗಿಸಲಿದೆ. ಇದಕ್ಕಾಗಿ ಜಿಯೋ ಮಾರ್ಟ್ “ದೇಶ್ ಕೀ ನಾಯ್ ದುಕಾನ್” (ದೇಶದ ಹೊಸ ಅಂಗಡಿ) ಸಬ್ ಟೈಟಲ್ ನ್ನು ನೀಡಿದ್ದು ಅಮೇಜಾನ್ ಫ್ಲಿಪ್‍ಕಾರ್ಟ್ ನಂತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

ವರದಿಗಳ ಪ್ರಕಾರ ರಿಲಯನ್ಸ್ ರಿಟೇಲ್, ತನ್ನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್‍ಗೆ ನೋಂದಾಯಿಸಲು ಮತ್ತು ಪ್ರಾಥಮಿಕ ರಿಯಾಯಿತಿಗಳನ್ನು ಪಡೆದುಕೊಳ್ಳಲು ಆಹ್ವಾನವನ್ನು ಕಳುಹಿಸುತ್ತಿದೆ. 3 ಸಾವಿರ ರೂ. ನೀಡಿ ನೊಂದಾಯಿಸಿದ್ದಲ್ಲಿ ಜಿಯೋ ಮಾರ್ಟ್ ನಲ್ಲಿ ಹೆಚ್ಚಿನ ರಿಯಾಯಿತಿ ಪಡೆಯುವ ಅವಕಾಶ ನೀಡುವುದಾಗಿ ಹೇಳಿದೆ.

ಜಿಯೋ ಮಾರ್ಟ್ ಸ್ಥಳೀಯ ಉಗ್ರಾಣವನ್ನು ನಿರ್ಮಿಸುವ ಬದಲು, “ಆನ್‍ಲೈನ್ – ಟು – ಆಫ್‍ಲೈನ್” ಮಾರುಕಟ್ಟೆ ನಿರ್ಮಿಸುತ್ತಿದೆ. ಅಮೆಜಾನ್ ಪ್ರೈಮ್ ನೌ ಮತ್ತು ಗ್ರೂಫರ್ಸ್‍ನಂತೆಯೇ ಕಿರಾಣಿ ವಸ್ತುಗಳನ್ನು ಹತ್ತಿರದ ವ್ಯಾಪಾರಿಗಳಿಂದ ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದೆ. ಇದರಿಂದ ಜಿಯೋ ಮಾರ್ಟ್ ಹೊಸ ಉದ್ಯಮವು ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರದೇಶದಲ್ಲಿನ ಆನ್‍ಲೈನ್ ಕೇಂದ್ರೀಕೃತ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ವೇದಿಕೆಯಾಗಿ ಹೊರ ಹೊಮ್ಮಲಿದೆ ಎನ್ನಲಾಗಿದೆ.

ಆರಂಭದಲ್ಲಿ, ಜಿಯೋಮಾರ್ಟ್, ದೈನಂದಿನ ಅವಶ್ಯಕತೆಗಳಾದ ಸಾಬೂನು, ಶ್ಯಾಂಪೂ ಮತ್ತು ಇತರ ಮನೆ ಬಳಕೆಯ ವಸ್ತುಗಳನ್ನು ಕೇವಲ ಎರಡು ಗಂಟೆಯಲ್ಲಿ ಪೂರೈಕೆ ಮಾಡಲಿದೆ ಎಂದು ಹೇಳಿಕೊಂಡಿದೆ. ಜಿಯೋ ಮಾರ್ಟ್‍ನ ಈ ಬೆಳವಣಿಗೆ ಅಮೆಜಾನ್‍ನ ಪ್ರೈಮ್ ನೌಗೆ ಕಷ್ಟ ಕರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಜಿಯೋಮಾರ್ಟ್ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಲಿದೆ.

Share This Article
Leave a Comment

Leave a Reply

Your email address will not be published. Required fields are marked *