ಶುಚಿ ಯೋಜನೆಗೆ ಮರು ಚಾಲನೆ – ಜನವರಿಯಿಂದ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ ವಿತರಣೆ: ದಿನೇಶ್ ಗುಂಡೂರಾವ್

Public TV
1 Min Read

ಬೆಳಗಾವಿ: 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ (Shuchi Scheme) ಮರು ಚಾಲನೆ ನೀಡಲಾಗುತ್ತಿದ್ದು ಜನವರಿಯಿಂದ ಶಾಲೆಯ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ (Napkin) ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಸೋಮವಾರ ಬೆಳಗಾವಿ ಅಧಿವೇಶನದಲ್ಲಿ (Belagavi Session) ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಶುಚಿ ಒಂದು ಮಹತ್ವವಾದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ. ಆದರೆ ಕಳೆದ 4 ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ 4 ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಭರ್ಜರಿ ಜಯ, ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌

10 ವರ್ಷದಿಂದ 18 ವರ್ಷದ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತ್ತಿತ್ತು. ಈ ಬಾರಿ ನೇರವಾಗಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್‌ಗಳನ್ನು ವಿತರಿಸುವಂತೆ ಏಜೆನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

40.50 ಕೋಟಿ ರೂ.ಯ ಯೋಜನೆ ಇದಾಗಿದ್ದು, ಸಂಪೂರ್ಣ ಹಣಕಾಸನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೆರವು ಸಿಕ್ಕಿಲ್ಲ. ಪ್ರಾಯೋಗಿಕವಾಗಿ ಮೆನ್‌ಸ್ಟ್ರುವಲ್ ಮುಟ್ಟಿನ ಕಪ್‌ಗಳನ್ನು ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

Share This Article