ವಾಟ್ಸಪ್ ನಂಬರ್ ಬ್ಲಾಕ್ ಮಾಡಿ, ಕರೆ ಸ್ವೀಕರಿಸದ್ದಕ್ಕೆ ಗೆಳತಿಗೆ ಬೆಂಕಿ ಹಚ್ಚಿ ಕೊಂದ

Public TV
3 Min Read

– ಕೇರಳ ಮಹಿಳಾ ಪೊಲೀಸ್ ಅಧಿಕಾರಿ ಕೊಲೆಯ ಸತ್ಯ ಬಿಚ್ಚಿಟ್ಟ ಆರೋಪಿ
– ಮದುವೆ ಆಗುವಂತೆ ಪೀಡಿಸುತ್ತಿದ್ದ ಹಂತಕ

ತಿರುವನಂತಪುರಂ: ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯಾ ಪುಷ್ಪಕರಣ್ ಅವರನ್ನು ಹತ್ಯೆ ಮಾಡಿದ್ದ ಆರೋಪಿ ನಿಜವಾದ ಕಾರಣವನ್ನು ಬಾಯಿಬಿಟ್ಟಿದ್ದಾನೆ.

ಆರೋಪಿ ಅಜಾಝ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೌಮ್ಯಾ ಪುಷ್ಪಕರಣ್ ಅವರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಅಜಾಝ್ ನಿರ್ಧರಿಸಿದ್ದ ಎಂಬ ಮಾಹಿತಿ ಅಭ್ಯವಾಗಿದೆ ಎಂದು ವಲ್ಲಿಕುನ್ನಂ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ತಿಳಿಸಿದ್ದಾರೆ.

ಮೂರು ವರ್ಷದ ಸ್ನೇಹ:
ಸೌಮ್ಯಾ ಅಜಾಝ್‍ನನ್ನು ತಿಸ್ಸೂರ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ನಂತರ ಫೇಸ್‍ಬುಕ್‍ನಲ್ಲಿ ಗೆಳೆತನವಾಗಿತ್ತು. ಈ ಮೂಲಕ ಇಬ್ಬರ ಮಧ್ಯೆ ಕಳೆದ ಮೂರು ವರ್ಷಗಳಿಂದ ಸ್ನೇಹವಿತ್ತು. ಅಜಾಝ್ ಸ್ನೇಹದ ಬಗ್ಗೆ ಸೌಮ್ಯಾರ ತಾಯಿ ಇಂದಿರಾಗೆ ಮಾತ್ರ ಗೊತ್ತಿತ್ತು. ಅಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆದಿದ್ದವು ಎಂದು ಸಬ್ ಇನ್‍ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಸೌಮ್ಯಾ ಅವರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ತಾಯಿ ಹಾಗೂ ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದರು. ಹೀಗಾಗಿ ಸೌಮ್ಯಾ ತಾಯಿಯೊಂದಿಗೆ ತನ್ನ ಜೀವನದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಳು. ಈ ಮಧ್ಯೆ ಅಜಾಝ್ ಸೌಮ್ಯಾರನ್ನು ವಿವಾಹವಾಗಬೇಕೆಂದು ಆಸೆಪಟ್ಟು, ಪತಿ ಮತ್ತು ಮಕ್ಕಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಈ ಸ್ನೇಹ ತನ್ನ ಜೀವನಕ್ಕೆ ಮುಳುವಾಗುತ್ತದೆ ಎಂದು ಅರಿತ ಸೌಮ್ಯಾ ಅವರು ಅಜಾಝ್‍ನಿಂದ ದೂರವಿರಲು ಯತ್ನಿಸಿದ್ದರು ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

ವಾಟ್ಸಪ್ ನಂಬರ್ ಬ್ಲಾಕ್:
ಅಜಾಝ್ ಮಾತ್ರ ಸೌಮ್ಯಾರನ್ನು ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸೌಮ್ಯಾ ಅಜಾಝ್‍ನ ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಅಷ್ಟೇ ಅಲ್ಲದೆ ಆತನ ಮೊಬೈಲ್ ಕರೆಗಳನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಜಾಝ್ ಕೊಲೆ ಮಾಡಿ ಬೆಂಕಿ ಹಚ್ಚಿದ್ದ. ಬಳಿಕ ಆತನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

ತನಿಖೆಯ ಪ್ರಕಾರ ಅಜಾಜ್ ಸೌಮ್ಯಾರನ್ನು ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾನೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿ ಅಪರಾಧಗಳ ಪರಿಣಾಮವನ್ನು ಚೆನ್ನಾಗಿ ಬಲ್ಲವನಾಗಿದ್ದ. ಯಾವುದೋ ಮಾರುಕಟ್ಟೆಯಿಂದ ಹರಿತವಾದ ಚಾಕುವೊಂದನ್ನು ಖರೀದಿಸಿದ್ದು, ಕೃತ್ಯಕ್ಕೆ ಬಳಸಿದ್ದಾನೆ ಎಂದರು.

ಸೌಮ್ಯ ತಾಯಿ ಕಣ್ಣೀರು:
ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾರ ತಾಯಿ, ಈ ಹಿಂದೆಯೂ ಅಜಾಝ್ ಇದೇ ರೀತಿ ಮಾಡಿದ್ದ. ಒಂದು ಬಾರಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ಬೆನ್ನಿಗೆ ಶೂನಿಂದ ಅಮಾನುಷವಾಗಿ ಹೊಡೆದಿದ್ದ. ಇದಾದ ಬಳಿಕ ನಾನು ಅವನೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ ನನ್ನನ್ನು ತಡೆದಿದ್ದ ಸೌಮ್ಯಾ, ನಾವು ಸುಮ್ಮನಿದ್ದರೆ ಅಜಾಝ್ ತನ್ನಪಾಡಿಗೆ ತಾನು ಇರುತ್ತಾನೆ ಎಂದು ಹೇಳಿದ್ದಳು. ಈಗ ಮಗಳು ಆತನ ನೀಚನ ಕೃತ್ಯಕ್ಕೆ ಬಲಿಯಾಗಿದ್ದಾಳೆ ಎಂದು ಕಣ್ಣೀರು ಹಾಕಿದರು.

ಸೌಮ್ಯಾರ ತಂದೆ ಹಾಸಿಗೆ ಹಿಡಿದಿದ್ದರಿಂದ ತಾಯಿ ಇಂದಿರಾ ಮಕ್ಕಳನ್ನು ಬಟ್ಟೆ ಹೊಲಿದು ಸಾಕಿದ್ದರು. ಸೌಮ್ಯಾರ ಗಂಡ ವಿದೇಶದಲ್ಲಿ ಕೆಲಸಮಾಡುತ್ತಿದ್ದು, ಆಕೆಗೆ 10 ವರ್ಷ ಮತ್ತು 7 ವರ್ಷದ ಗಂಡು ಮಕ್ಕಳು ಮತ್ತು 4 ವರ್ಷದ ಹೆಣ್ಣು ಮಗುವಿದೆ. ದೊಡ್ಡ ಮಕ್ಕಳು ತಮ್ಮ ತಾಯಿಯ ಸಾವಿನ ಸುದ್ದಿಯಿಂದ ಆಘಾತಕಾರಿ ಸ್ಥಿತಿಯಲ್ಲಿದ್ದು, ಚಿಕ್ಕ ಮಗುವಿಗೆ ಏನಾಗಿದೆ ಎಂಬುದು ಸಹ ತಿಳಿದಿಲ್ಲ ಎಂದು ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ಭಾವುಕರಾದರು.

ಈ ಹಿಂದೆ ಆಗಿದ್ದೇನು?:
ಸೌಮ್ಯಾ ಅವರು ಶನಿವಾರ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಅವರ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದ. ಅಜಾಝ್ ತನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದರು. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಸೌಮ್ಯಾರನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಅಜಾಝ್ ಬೆಂಕಿ ಹಚ್ಚಿಕೊಂಡಿದ್ದ. ಆದರೆ ಬದುಕಿ ಉಳಿದಿದ್ದ ಆತನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *