ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

Public TV
2 Min Read

ಬೆಂಗಳೂರು: ಹಲವು ದಿನಗಳಿಂದ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿವಿಧ ಜಿಲ್ಲೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇಷ್ಟಕ್ಕೇ ನಿಲ್ಲದೇ ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 6ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಆಗ್ತಿದ್ದು, ಮಡಿಕೇರಿ ತಾಲೂಕಿನ ಕೊಯಿನಾಡು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೇಲೆ ಬೃಹತ್ ಗುಡ್ಡ ಕುಸಿದಿದೆ. ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪಯಸ್ವಿನಿ ನದಿ ನೀರು ಬಂದಿದ್ದು ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆ ಮುಂಭಾಗದಲ್ಲಿ ನಿಲ್ಲಿಸಿದ ಕಾರುಗಳು ನೀರಿನ ರಭಸಕ್ಕೆ ತೇಲಾಡಿವೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಬರ್ತ್ ಡೇ ಆಚರಣೆ – ಸರಿಯಾಗಿ 12 ಗಂಟೆಗೆ ಕೇಕ್ ಕಟ್

ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೊಯನಾಡಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮ ಬಳಿ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ. ಸೇತುವೆ ದಾಟಲು ಹೋಗಿ ನದಿಗೆ ಲಾರಿ ಬಿದ್ದು ಕ್ಲೀನರ್ ಮತ್ತು ಚಾಲಕ ರಕ್ಷಣೆಗಾಗಿ ಪರದಾಡಿದ್ದಾರೆ. ಉಡುಪಿಯಲ್ಲಿ ಮಳೆಯಿಂದಾಗಿ ಬೈಂದೂರು ತಾಲೂಕಿನ ಶಿರೂರಿನಲ್ಲಿ ನೆರೆಗೆ ಇಪ್ಪತ್ತಕ್ಕಿಂತ ಹೆಚ್ಚು ನಾಡದೋಣಿ ಕೊಚ್ಚಿಹೋಗಿದ್ದು, 50 ಲಕ್ಷ ಮೌಲ್ಯದ ದೋಣಿ ಸಮುದ್ರ ಪಾಲಾಗಿದೆ. ಶಿರೂರಿನಲ್ಲಿ ನಾಗಮ್ಮ ಶೆಟ್ಟಿ ಎಂಬವರ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸಧಾನ್ಯಗಳೆಲ್ಲ ನೀರು ಪಾಲಾಗಿದೆ. ಇದನ್ನೂ ಓದಿ: ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

ಹಾಸನದಲ್ಲಿ ನ್ಯಾಷನಲ್ ಹೈವೇಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕಾರು, ಎರಡು ಬೈಕ್ ಕೊಚ್ಚಿ ಹೋಗಿದೆ. ಅರಸೀಕೆರೆ ತಾಲೂಕಿನ ಗಿಜಿಹಳ್ಳಿ, ಅಂಚೇಕೊಪ್ಪಲು ಗ್ರಾಮದ ಕೆರೆ ಏರಿ ಕುಸಿತವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಸೇತುವೆ ಮುರಿದ ಪರಿಣಾಮ 200ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ.

ಸುಳ್ಯ, ಕಡಬ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಬಂದಿದ್ದ ಕೂಲಿ ಕಾರ್ಮಿಕ ನಾಗರಾಜು, ಶಿರಾ ತಾಲೂಕಿನಲ್ಲಿ ಹಳ್ಳ ದಾಟುವಾಗ ಬೈಕ್ ಸಮೇತ ಶಿಕ್ಷಕ ಆರಿಫ್ ಉಲ್ಲಾ ಕೊಚ್ಚಿ ಹೋಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಕೆರೆ ಏರಿ ಒಡೆದು ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದೆ.

ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಯಶವಂತಪುರ, ಪೀಣ್ಯ, ಮಹಾಲಕ್ಷ್ಮೀ ಲೇಔಟ್, ಗೊರಗುಂಟೆಪಾಳ್ಯ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮೇಖ್ರಿ ಸರ್ಕಲ್, ಜಯಮಹಲ್, ಹೆಬ್ಬಾಳ, ಏರ್ಪೋರ್ಟ್ ರೋಡ್, ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಸಾಯಿ ಲೇಔಟ್ ಮತ್ತೆ ಮಳೆಯಿಂದಾಗಿ ಜಲಾವೃತವಾಗಿದೆ. ಮಾನ್ಯತಾ ಟೆಕ್ ಪಾರ್ಕ್ನಾ ಸರ್ವಿಸ್ ರಸ್ತೆ ಮುಳುಗಡೆಯಾಗಿದೆ. ಅರ್ಧ ಅಡಿಯಷ್ಟು ನೀರು ನಿಂತ ಕಾರಣ ವೆಹಿಕಲ್ ಓಡಾಟಕ್ಕೆ ಕಷ್ಟವಾಯ್ತು. ನಾಗರಭಾವಿ ಕಡೆಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಕಡೆಗೆ ಹೋಗುವ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಇನ್ನುಳಿದಂತೆ ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದ ದೃಶ್ಯ ಕಂಡುಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *