ರೆಬೆಲ್ ಸ್ಟಾರ್ ಗೆ ಮೈಸೂರ್ ಪಾಕ್ ಅಂದ್ರೆ ಪಂಚಪ್ರಾಣ- ಮಂಡ್ಯ, ಬೆಂಗಳೂರು ಕಡೆಗೆ ಹೊರಟ್ರೆ ಪಾರ್ಸೆಲ್ ರೆಡಿ

Public TV
2 Min Read

ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಸಿಹಿ ತಿನಿಸುಗಳಲ್ಲಿ ಮೈಸೂರ್ ಪಾಕ್ ಅಂದರೆ ಪ್ರಿಯವಾದದ್ದು. ಅದರಲ್ಲೂ ರಾಮನಗರದ ಹೋಟೆಲ್‍ನ ಮೈಸೂರ್ ಪಾಕ್ ಅಂದರೆ ಅಚ್ಚುಮೆಚ್ಚಿನದ್ದಾಗಿತ್ತು. ಆ ನಗರ ಸಮೀಪ ಬರುತ್ತಿದ್ದಂತೆ ಮೈಸೂರ್ ಪಾಕ್ ಅಂಬಿಗಾಗಿ ರೆಡಿಯಾಗುತ್ತಿತ್ತು. ಅಂಬಿ ನಮ್ಮನ್ನಗಲುವ 15 ದಿನಗಳ ಮುಂಚೆ ಕೂಡ ಅಲ್ಲಿಯ ಮೈಸೂರ್ ಪಾಕ್‍ನ್ನ ಸವಿದಿದ್ದರು.

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಹೋದಲ್ಲಿ ಬಂದಲ್ಲೆಲ್ಲಾ ಹಾಗೂ ದೇಶ-ವಿದೇಶಗಳಲ್ಲೂ ಸ್ನೇಹಿತರು ಇದ್ದಾರೆ. ಮಂಡ್ಯ, ಮೈಸೂರು ಮಾತ್ರವಲ್ಲದೇ ಅಂಬಿಗೆ ರೇಷ್ಮೆನಗರಿ ರಾಮನಗರದಲ್ಲೂ ಉತ್ತಮ ಬಾಂಧವ್ಯವಿದೆ. ಊಟ, ತಿಂಡಿ-ತಿನಿಸಿನ ವಿಚಾರದಲ್ಲೂ ಅಂಬಿಗೆ ರಾಮನಗರ ಸಖತ್ ಪ್ರಿಯವಾಗಿತ್ತು. ಅದರಲ್ಲೂ ಚನ್ನಪಟ್ಟಣದಲ್ಲಿ ನಾಟಿಕೋಳಿ-ಮುದ್ದೆ ಇಷ್ಟಪಟ್ಟರೆ, ರಾಮನಗರದಲ್ಲಿ ಸಿಹಿ ತಿನಿಸು ಮೈಸೂರ್ ಪಾಕ್‍ನ್ನು ಇಷ್ಟಪಟ್ಟು ತಿನ್ನುತ್ತಿದ್ದರು.

ಬೆಂಗಳೂರಿನಿಂದ ಮಂಡ್ಯ ಇಲ್ಲವೇ ಮೈಸೂರು ಕಡೆಗೆ ಅಂಬಿ ಹೊರಟರೆ ಅವರ ಪರಿಚಿತರು ನಗರದಲ್ಲಿನ ಹೋಟೆಲ್ ಜನಾರ್ದನ್‍ಗೆ ಹೋಗಿ ಮೈಸೂರ್ ಪಾಕ್ ಪಾರ್ಸೆಲ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮನ್ನಗಲಿದ 15 ದಿನಗಳ ಮುಂಚೆ ರಾಮನಗರಕ್ಕೆ ಆಗಮಿಸಿದ್ದ ಅಂಬರೀಶ್ ತಮ್ಮ ಪರಿಚಿತರನ್ನ ಕಳಿಸಿ 2 ಕೆಜಿಯಷ್ಟು ಮೈಸೂರ್ ಪಾಕ್ ಪಾರ್ಸೆಲ್ ತೆಗೆದುಕೊಂಡಿದ್ದರು.

1980ರ ಕಾಲದಲ್ಲೇ ಅಂಬಿ ಈ ಹೋಟೆಲ್‍ನ ಮೈಸೂರ್ ಪಾಕ್‍ನ ರುಚಿಯನ್ನ ಸವಿದಿದ್ದರು. 1997ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಶ್ ಎಂ.ಜಿ ರಸ್ತೆಯಲ್ಲಿ ಪ್ರಚಾರ ಮಾಡುವ ವೇಳೆ ಮೈಸೂರ್ ಪಾಕ್‍ನ್ನ ಹೊಗಳಿದ್ದರು. ಅಲ್ಲದೇ ಸ್ಥಳದಲ್ಲಿಯೇ ಮೈಸೂರ್ ಪಾಕ್ ಬೇಕೆಂದು ತರಿಸಿಕೊಂಡು ಸವಿದಿದ್ದರು. ಇಷ್ಟು ಮಾತ್ರವಲ್ಲದೇ ಆಪ್ತಮಿತ್ರ ವಿಷ್ಣು ದಂಪತಿಗೂ ಜನಾರ್ದನ್ ಹೋಟೆಲ್‍ನ ಮೈಸೂರು ಪಾಕ್ ರುಚಿ ತೋರಿಸಿದ್ದರು.

ಇನ್ನೊಂದು ದಿನ ರಾಮದೇವರ ಬೆಟ್ಟದಲ್ಲಿ ‘ವಂದೇ ಮಾತರಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ 1,500 ಕಲಾವಿದರಿಗೆ ಸ್ವಂತ ಖರ್ಚಿನಲ್ಲಿ ಜನಾರ್ದನ್ ಹೋಟೆಲ್‍ನಿಂದ ಮೈಸೂರ್ ಪಾಕ್ ತರಿಸಿ ಕೊಡಿಸಿದ್ದರು. ಕಳೆದ 66ನೇ ವರ್ಷದ ಹುಟ್ಟುಹಬ್ಬದ ವೇಳೆ ಹೆದ್ದಾರಿಯಲ್ಲಿಯೇ ತಮ್ಮ ಕಾರ್ ನಿಲ್ಲಿಸಿ ಗೆಳೆಯರನ್ನು ಕಳುಹಿಸಿ ಮೈಸೂರ್ ಪಾಕ್ ತರಿಸಿಕೊಂಡಿದ್ದರು. ಹೋಟೆಲ್ ಜನಾರ್ದನ್‍ನ ಮೈಸೂರ್ ಪಾಕ್ ಅಂದರೆ ಅಂಬಿಗೆ ಸಾಕಷ್ಟು ಪ್ರಿಯವಾಗಿತ್ತು. ಏನೇ ಸ್ಪೆಷಲ್ ಇದ್ದರೂ ಮೈಸೂರ್ ಪಾಕ್ ಬೇಕು ಎಂದು ಕೇಳುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *