ನಾನು ಜೊತೆಗಿರುವಾಗಲೇ ಸಿದ್ದರಾಮಯ್ಯನವರಿಗೆ ಅತೃಪ್ತರು ಕರೆ ಮಾಡಿದ್ದರು: ತಂಗಡಗಿ ಬಾಂಬ್

Public TV
2 Min Read

ಕೊಪ್ಪಳ: ನಾವು ಮರಳಿ ಬರುತ್ತೇವೆ ನಮ್ಮನ್ನು ಅನರ್ಹ ಮಾಡಬೇಡಿ ಎಂದು ನಾನು ಜೊತೆಗಿದ್ದಾಗಲೇ ಸಿದ್ದರಾಮಯ್ಯನವರಿಗೆ ಅತೃಪ್ತ ಶಾಸಕರು ಕರೆ ಮಾಡಿದ್ದರು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಅತೃಪ್ತರ ಕುರಿತು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಅತೃಪ್ತ ಶಾಸಕರು ನಾನು ಜೊತೆಗಿರುವಾಗಲೇ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದರು. ನಾವು ಮರಳಿ ಬರುತ್ತೇವೆ ನಮ್ಮನ್ನು ಅನರ್ಹ ಮಾಡಬೇಡಿ ಎಂದು ಕೇಳಿಕೊಂಡರು. ಹೀಗೆ ಅತೃಪ್ತ ಶಾಸಕರು ಬೀದಿಯಲ್ಲಿ ನಿಲ್ಲುವಂತಹ ಸ್ಥಿತಿಯನ್ನು ಇಂದು ಬಿಜೆಪಿ ನಿರ್ಮಾಣ ಮಾಡಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ನಂಬಿದವರನ್ನು ಬೀದಿಗೆ ನಿಲ್ಲಿಸಿ ಇದೀಗ ಬಿಜೆಪಿ ಸೇಫ್ ಆಗಿದೆ. ಅಲ್ಲದೆ ಅತೃಪ್ತ ಶಾಸಕರನ್ನು ಅನರ್ಹ ಮಾಡಿದರೆ ಬಿಜೆಪಿಗೆ ಯಾಕೆ ಇಷ್ಟು ಕಷ್ಟವಾಗಿದೆ. ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರ್ಕಾರ ರಚಿಸುತ್ತಿದೆ. ಬಿಜೆಪಿಯವರು ಪಕ್ಕದ ಮನೆಯವರ ಮಗುವನ್ನು ತಮ್ಮ ಮಗು ಎಂದು ನಾಮಕರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಅತೃಪ್ತ ಶಾಸಕರಿಂದ ತಮ್ಮ ಮಾನ ಮುಚ್ಚಿಕೊಳ್ಳುವುದಕ್ಕೆ ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಯಾವ ಅತೃಪ್ತ ಶಾಸಕರನ್ನೂ ಕಳುಹಿಸಿಲ್ಲ. ಅತೃಪ್ತರ ರಾಜೀನಾಮೆ ನಡೆಯಿಂದ ಸಿದ್ದರಾಮಯ್ಯ ತುಂಬಾ ನೊಂದಿದ್ದಾರೆ ಎಂದು ಶಿವರಾಜ್ ತಂಗಡಗಿ ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಸಿದ್ದರಾಮಯ್ಯನವರಿಗೆ ಕೆಲವು ಅತೃಪ್ತ ಶಾಸಕರು ಕರೆ ಮಾಡಿದ್ದರು ಎಂದು ಎಂ.ಬಿ.ಪಾಟೀಲ್ ಅವರು ಹೇಳಿ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ ಕೆಲವು ಅತೃಪ್ತ ಶಾಸಕರು ನನಗೆ ಕರೆ ಮಾಡಿದ್ದು ನಿಜ ಎಂದು ಹೇಳಿದ್ದರು. ಈ ಸುದ್ದಿಯನ್ನು ಕೇಳಿದ ಅತೃಪ್ತ ಶಾಸಕರು ದಿಢೀರನೇ ಎಚ್ಚರವಾಗಿದ್ದು, ಅತೃಪ್ತ ಶಾಸಕ ಎಚ್.ವಿಶ್ವನಾಥ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೇ ಅತೃಪ್ತ ಶಾಸಕರು ಯಾವುದೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಸಂಪರ್ಕಿಸಿಲ್ಲ ಇದು ಸುಳ್ಳು ಸುದ್ದಿ, ದಾರಿ ತಪ್ಪಿಸಲು ಮೈತ್ರಿ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದರು.

ಈ ಪ್ರಹಸನದ ಭಾಗವಾಗಿ ಕರೆ ಮಾಡಿದ್ದರು ಎನ್ನಲಾದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರೇ ಪ್ರತಿಕ್ರಿಯೆ ನೀಡಿ, ನಾನು ಸಿದ್ದರಾಮಯ್ಯ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ತಿಳಿಸಿದ್ದರು. ಇದೀಗ ಕಾಂಗ್ರೆಸ್‍ನ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಇದೇ ಮಾತನ್ನು ಹೇಳಿದ್ದು, ನಾನು ಇದ್ದಾಗಲೇ ಸಿದ್ದರಾಮಯ್ಯನವರಿಗೆ ಅತೃಪ್ತ ಶಾಸಕರು ಕರೆ ಮಾಡಿದ್ದರು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *