ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಚಿವ ಎಂಟಿಬಿ ನಾಗರಾಜ್ ಅವರು ರಾಜೀನಾಮೆ ವಾಪಸ್ ಪಡೆಯಲು ಮುಂದಾಗಿದ್ದಾರೆ.
ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅವರ ಮನವೊಲಿಸುವಲ್ಲಿ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಖಾನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ ಕೊಂಚ ನಿರಾಳವಾಗಿದೆ.
ಸಂಧಾನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂಟಿಬಿ ನಾಗರಾಜ್ ಅವರು, ಕಾರಣಾಂತರಗಳಿಂದ ಮನಸ್ಸಿಗೆ ಬೇಜಾರು ಆಗಿತ್ತು. ಹೀಗಾಗಿ ರಾಜೀನಾಮೆ ಕೊಟ್ಟಿದ್ದೆ. ಈಗ ಪಕ್ಷದ ನಾಯಕರ ಮಾತಿಗೆ ಬೆಲೆ ಕೊಟ್ಟು ನಿರ್ಧಾರವನ್ನು ಬದಲಿಸಿ, ರಾಜೀನಾಮೆ ವಾಪಸ್ ಪಡೆಯುತ್ತೇನೆ. ಕಾಂಗ್ರೆಸ್‍ನಲ್ಲೇ ಉಳಿಯುತ್ತೇನೆ ಹಾಗೂ ಸ್ನೇಹಿತರನ್ನು ಕರೆತರುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವುಕ್ಕೆ ನನಗೂ ಇಷ್ಟ ಇರಲಿಲ್ಲ. ಶಾಸಕ ಡಾ.ಸುಧಾಕರ್ ಹಾಗೂ ನಾನು ಆತ್ಮೀಯರು. ಹೀಗಾಗಿ ಇಬ್ಬರು ಚರ್ಚೆ ಮಾಡಿಯೇ ರಾಜೀನಾಮೆ ಸಲ್ಲಿಸಿದ್ದೇವು. ಹಿರಿಯ ನಾಯಕರು ಪಕ್ಷಕ್ಕೆ ನನ್ನ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಇಂದು ಮನವರಿಕೆ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ಸು ಪಡೆಯುತ್ತೇನೆ. ರಾಜೀನಾಮೆ ವಾಪಸ್ ಪಡೆಯುವಂತೆ ಸುಧಾಕರ್ ಅವರಿಗೂ ಸಲಹೆ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಸುಧಾಕರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂಬೈನಿಂದ ವಾಪಸ್ ಬರುತ್ತಾರೆ ಎಂಬ ನಂಬಿಕೆ ನನಗಿದೆ. ವಿಶ್ವಾಸಮತಯಾಚನೆ ವೇಳೆಗೆ ಎಲ್ಲ ಅತೃಪ್ತ ಶಾಸಕರ ಮನವೊಲಿಕೆ ಯತ್ನಿಸುತ್ತೇವೆ ಎಂದು ತಿಳಿಸಿದರು.