-ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರ ನಡೆ ನಿಗೂಢ!
ಬೆಂಗಳೂರು: ರಾಜ್ಯ ರಾಜಕಾರಣದ ಸಂಕ್ರಾಂತಿಯ ಮಹಾಪರ್ವ ಬಹುತೇಕ ಇಂದು ಅಂತ್ಯಗೊಳ್ಳಲಿದೆ. ಬಂಡಾಯದ ಬಾವುಟ ಹಾರಿಸಿ ಮುಂಬೈನಲ್ಲಿ ಬಿಜೆಪಿ ಗೂಡು ಸೇರಿಕೊಂಡಿದ್ದ ಕಾಂಗ್ರೆಸ್‍ನ ಅತೃಪ್ತ ಶಾಸಕರು ಇಂದು ಮಧ್ಯಾಹ್ನ 3 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬೆಂಗಳೂರಿಗೆ ಬರುವ ಶಾಸಕರು ರಾಜೀನಾಮೆ ಸಲ್ಲಿಸ್ತಾರಾ ಅಥವಾ ತಮ್ಮ ಹಳೆಯ ಗೂಡನ್ನು ಸೇರಿಕೊಳ್ಳುತ್ತಾರಾ ಎನ್ನುವುದು ಇಂದು ಸಂಜೆ ಸ್ಪಷ್ಟವಾಗಲಿದೆ.
ಬೆಂಗಳೂರಿಗೆ ಆಗಮಿಸಲಿರುವ ಅತೃಪ್ತ ಶಾಸಕರು ನೇರವಾಗಿ ತಮ್ಮ ನಾಯಕ ಸಿದ್ದರಾಮಯ್ಯರ ಮನೆಗೆ ಹೋಗಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸುವ ಸಾಧ್ಯತೆಗಳಿವೆ ಎಂದು ಕೆಲ ಮಂದಿ ಹೇಳುತ್ತಿದ್ದಾರೆ. ಇತ್ತ ಗುರುಗ್ರಾಮದಲ್ಲಿರುವ ಬಿಜೆಪಿಯ ಶಾಸಕರು ಇಂದು ಸಂಜೆ ರೆಸಾರ್ಟ್ ಖಾಲಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪುಷ್ಠಿ ಎನ್ನುವಂತೆ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಯಡಿಯೂರಪ್ಪನವರ ಪಿಎ ಸಂತೋಷ್ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕನ್ನು ಸಂತೋಷ್ ಬೆಂಗಳೂರಿಗೆ ವಿಶೇಷ ವಿಮಾನ ನಿಲ್ದಾಣದಲ್ಲಿ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಕಾಣಿಸಿಕೊಂಡಿದ್ದ ಪಿಎ ಸಂತೋಷ್ ಮಾಧ್ಯಮಗಳನ್ನು ಕಂಡು ಹೋಟೆಲ್ ನಿಂದ ಕಾಲ್ಕಿತ್ತಿದ್ದಾರೆ.
ಇತ್ತ ಯಡಿಯೂರಪ್ಪನವರು ಮಾತ್ರ ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ. ಯಾವ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ಲೋಕಸಭಾ ಚುನಾವಣೆಗೆ ಸಿದ್ಧತೆ ಹಿನ್ನೆಲೆಯಲ್ಲಿ ನಮ್ಮ ಶಾಸಕರು ಗುರುಗ್ರಾಮದಲ್ಲಿದ್ದಾರೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv