ಎಫ್‌ಸಿಐ ನೀತಿ ಬದಲಾವಣೆ ಹಿನ್ನೆಲೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಿಲ್ಲ: ಅಶೋಕ್ ಕುಮಾರ್ ಮೀನಾ ಸ್ಪಷ್ಟನೆ

Public TV
2 Min Read

ನವದೆಹಲಿ: ರಾಷ್ಟ್ರೀಯ ಆಹಾರ ನಿಗಮದ ನೀತಿ ಬದಲಾಗಿರುವ ಹಿನ್ನೆಲೆ ಕರ್ನಾಟಕ (Karnataka) ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ (Rice) ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಕ್ಷ ಅಶೋಕ್ ಕುಮಾರ್ ಮೀನಾ (Ashok kumar Meena) ಹೇಳಿದ್ದಾರೆ.

ರಾಜಕೀಯ ಆರೋಪಗಳ ಬೆನ್ನಲ್ಲೇ ದೆಹಲಿಯ ಕೃಷಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅವರು, ಹೆಚ್ಚುವರಿ ಅಕ್ಕಿಗಾಗಿ ಕರ್ನಾಟಕ ಸರ್ಕಾರದಿಂದ ಮನವಿ ಬಂದಿತ್ತು. ನಮ್ಮ ಕರ್ನಾಟಕ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಹೆಚ್ಚುವರಿ ಧಾನ್ಯ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ನೀತಿ ಬದಲಾವಣೆ ಆಗಿರುವ ಮಾಹಿತಿ ಇಲ್ಲದೇ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಎಫ್‌ಸಿಐ ಸದ್ಯ ನೀತಿಯಲ್ಲಿ ಬದಲಾವಣೆಯಾಗಿದೆ. ರಾಜ್ಯಗಳಿಗೆ ನೇರವಾಗಿ ಅಕ್ಕಿ ಮಾರಾಟ ನಿಲ್ಲಿಸಲಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಬೆಲೆ ನಿಯಂತ್ರಿಸಲು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ರಾಜ್ಯಗಳಿಗೆ ನೀಡುತ್ತಿದ್ದ ಹೆಚ್ಚುವರಿ ಧಾನ್ಯದ ಸರಬರಾಜು ತಡೆಹಿಡಿದಿದೆ. ಈ ಹಿಂದೆ ರಾಜ್ಯಗಳಿಗೆ ಹೆಚ್ಚಿನ ಧಾನ್ಯ ಪೂರೈಕೆ ಮಾಡಲಾಗುತ್ತಿತ್ತು. ಈ ನಡುವೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಬೆಲೆ ಏರಿಕೆಯಾಗುತ್ತಿದೆ. ಬೆಲೆ ನಿಯಂತ್ರಣ ಮಾಡಲು ಹೊಸ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಎಲ್ಲ ರಾಜ್ಯಗಳಿಗೆ ಎಷ್ಟು ಪ್ರಮಾಣದ ಅಕ್ಕಿ ನೀಡಬೇಕು ಅದರ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ 80 ಕೋಟಿ ಜನರು ಗರೀಬ್ ಕಲ್ಯಾಣ್ ವ್ಯಾಪ್ತಿಯಲ್ಲಿದ್ದಾರೆ. ಬಾಕಿ 60 ಕೋಟಿ ಜನರ ಬಗ್ಗೆಯೂ ನಾವು ಯೋಚಿಸಬೇಕಿದೆ. ಈ ಹಿನ್ನೆಲೆ ನಿಯಮ ಬದಲಾಯಿಸಿದೆ. ಈ ನೀತಿ ಬದಲಾವಣೆಯಾಗಿರುವ ಬಗ್ಗೆ ಮಾಹಿತಿ ಇಲ್ಲದೆ ನಮ್ಮ ಅಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಮಗೆ ಮಾಹಿತಿ ಬಂದ ಬಳಿಕ ಆ ಪತ್ರವನ್ನು ಹಿಂಪಡೆಯಲಾಗಿದೆ ಎಂದರು.

ಅನ್ನಭಾಗ್ಯ ಯೋಜನೆಗೆ ಬೇಕಾಗುವ ಹೆಚ್ಚುವರಿ ಅಕ್ಕಿ ಪಡೆಯುವ ಬಗ್ಗೆ ನಮ್ಮ ಜೊತೆಗೆ ಈ ಮುಂಚೆ ಚರ್ಚಿಸಿಲ್ಲ. ಒಂದು ವೇಳೆ ಚರ್ಚಿಸಿದ್ದರೆ ಎಫ್‌ಸಿಐ ನೀತಿ ಬದಲಾಗಿರುವ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವು. ಕೇವಲ ಕರ್ನಾಟಕಕ್ಕೆ ಮಾತ್ರ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿಲ್ಲ. ತಮಿಳುನಾಡಿಗೂ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ್ದೇವೆ ಎಂದು ಮೀನಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಾಪಸ್ – ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

Share This Article