ಧ್ರುವ ಸರ್ಜಾ ಅಭಿನಯದ ಪೊಗರು ತಡವಾಗಲು ಅಸಲೀ ಕಾರಣ!

Public TV
1 Min Read

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಘೋಷಣೆಯಾಗಿ ವರ್ಷವಾಗುತ್ತಾ ಬಂದಿದೆ. ಆದರೆ ಈ ಅವಧಿಯಲ್ಲಿ ಈ ಚಿತ್ರದ ಕಥೆ ಏನಾಯಿತೆಂಬುದರ ಬಗ್ಗೆ ಸಣ್ಣದೊಂದು ಮಾಹಿತಿಯೂ ಸಿಗದೆ ಅಭಿಮಾನಿಗಳೆಲ್ಲ ಗೊಂದಲಕ್ಕೀಡಾಗಿದ್ದಾರೆ. ಧ್ರುವ ವರ್ಷಕ್ಕೊಂದಾದರೂ ಚಿತ್ರಗಳಲ್ಲಿ ನಟಿಸಬೇಕೆಂಬುದು ಅಭಿಮಾನಿಗಳ ಇರಾದೆ. ಧ್ರುವ ಕೂಡಾ ಇದಕ್ಕೆ ಮನಸು ಮಾಡಿ ಮುಂದಡಿ ಇಟ್ಟಿದ್ದರು. ಆದರೂ ಪೊಗರು ಚಿತ್ರ ಇದ್ದಲ್ಲೇ ಇರೋದರ ಹಿಂದೊಂದು ಸಂಕಟದ ಕಥೆಯಿದೆ!

ಅದು ಧ್ರುವ ಸರ್ಜಾ ತುಂಬಾ ಹಚ್ಚಿಕೊಂಡಿರೋ ಅವರ ತಾಯಿಯ ಅನಾರೋಗ್ಯದ ವಿಚಾರ. ಯಾವುದೇ ಹೊಸಾ ಚಿತ್ರವಿದ್ದರೂ ಅದರ ಬಗ್ಗೆ ಅಮ್ಮನ ಬಳಿ ಹೇಳಿಕೊಂಡು ಅವರ ಆಶೀರ್ವಾದ ಪಡೆದ ನಂತರವೇ ಧ್ರುವ ಮುಂದುವರೆಯುತ್ತಿದ್ದರು. ಆ ನಂತರವೂ ಚಿತ್ರೀಕರಣದ ಪ್ರತಿಯೊಂದು ವಿಚಾರಗಳನ್ನು ತಾಯಿಯ ಬಳಿ ಹೇಳಿಕೊಂಡರೇನೇ ಅವರಿಗೆ ಸಮಾಧಾನ. ಆದರೀಗ ಅಂಥಾ ಅಮ್ಮನೇ ಯಾವುದಕ್ಕೂ ಸ್ಪಂದಿಸದ ಸ್ಥಿತಿಯಲ್ಲಿದ್ದಾರೆ.

ಪೊಗರು ಚಿತ್ರ ಆರಂಭವಾದಾಗ ನಿರ್ದೇಶಕ ನಂದ ಕಿಶೋರ್ ಅವರ ಬಯಕೆಯಂತೆಯೇ ಅದಕ್ಕೆ ಬೇಕಿರೋ ತಯಾರಿಯನ್ನು ಧ್ರುವ ಆರಂಭಿಸಿದ್ದರು. ಈ ಚಿತ್ರದಲ್ಲಿ ಹದಿನೈದು ವರ್ಷದ ಹುಡುಗನಾಗಿಯೂ ಕಾಣಿಸಿಕೊಳ್ಳಬೇಕಿದ್ದುದರಿಂದ ಅದಕ್ಕೂ ರೆಡಿಯಾಗಲಾರಂಭಿಸಿದ್ದರು. ಆದರೆ ಇನ್ನೇನು ಟೇಕಾಫ್ ಆಗಬೇಕೆಂಬಷ್ಟರಲ್ಲಿ ಧ್ರುವ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಬಹಳಷ್ಟು ಕಾಲ ಖುದ್ದಾಗಿ ಅವರೇ ತಾಯಿಯ ದೇಖಾರೇಕಿ ನೋಡಿಕೊಂಡ ನಂತರ ಒಂದಷ್ಟು ಚೇತರಿಕೆ ಕಂಡು ಬಂದಿತ್ತು. ಇದರಿಂದ ಖುಷಿಗೊಂಡ ಧ್ರುವ ಮತ್ತೆ ಪೊಗರು ಚಿತ್ರಕ್ಕೆ ಮರಳ ಬೇಕೆಂಬಷ್ಟರಲ್ಲಿಯೇ ಅವರ ತಾಯಿಗೆ ಸ್ಟ್ರೋಕ್ ಆಗಿಬಿಟ್ಟಿದೆ.

ಹೀಗೆ ಎದುರಾದ ಸರಣಿ ಆಘಾತಗಳಿಂದಾಗಿ ಪೊಗರು ಚಿತ್ರ ನಿಧಾನವಾಗಿದೆ. ಅಸಲೀ ಕಾರಣ ಇದು ಮಾತ್ರ. ಇದೀಗ ನಿರ್ದೇಶಕ ನಂದಕಿಶೋರ್ ಮತ್ತೆ ಚಿತ್ರ ಆರಂಭವಾಗೋ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳದ್ದೂ ಅದೇ ನಿರೀಕ್ಷೆ. ಧ್ರುವ ಅವರ ಅಮ್ಮನ ಆರೋಗ್ಯ ಸುಧಾರಿಸಿ ಆದಷ್ಟು ಬೇಗನೆ ಪೊಗರು ಚಿತ್ರ ಶುರುವಾಗುವಂತಾಗಲಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *