ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

Public TV
1 Min Read

ಬಾಗಲಕೋಟೆ: ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಯಂತೆ ಅಂತಾ ಹೇಳಿಕೊಂಡು 10 ದಿನದಿಂದ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರೆ. ಮೋದಿ-ದೇವೇಗೌಡರು ಪರಸ್ಪರ ಹೊಗಳಿಕೊಂಡ ಮೇಲಂತೂ ಸಿಎಂ ಹೇಳಿಕೆ ತೀವ್ರ ಸ್ವರೂಪ ಪಡೆದಿದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಸಿದ್ದರಾಮಯ್ಯ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಯಾವುದಕ್ಕೂ ಇರಲಿ ಅಂತಾ ಸಿಎಂ ಕೆಲ ಜೆಡಿಎಸ್ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ನವಲಗುಂದದಲ್ಲಿ ಜೆಡಿಎಸ್ ಕೋನರೆಡ್ಡಿಯನ್ನು ಸುಲಭವಾಗಿ ಗೆಲ್ಲುವಂತೆ ನೋಡಿಕೊಂಡು, ಒಂದು ವೇಳೆ ಮೈತ್ರಿ ಸಂದರ್ಭ ಬಂದ್ರೆ ಕೋನರೆಡ್ಡಿಯನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

ಕೋನರೆಡ್ಡಿ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಸಿಎಂ ಸ್ಪರ್ಧಿಸಿರೋ ಬದಾಮಿಯಲ್ಲಿಯೂ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದ ಚರ್ಚೆ ನಡೆದಿದ್ಯಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

ಕಾಂಗ್ರೆಸ್-ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬ ಪ್ರಶ್ನೆಗಳಿಗೆ ಪೂರಕ ಎಂಬಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹಾಗೂ ಬದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್ ಭೇಟಿ ಮಾಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್, ಎಸ್.ಆರ್.ಪಾಟೀಲರನ್ನ ಭೇಟಿಯಾಗಿದ್ದು ನಿಜ. ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ಆಕಸ್ಮಿಕವಾಗಿ ಹೋಟೆಲ್ ನಲ್ಲಿ ಸಿಕ್ಕಿದ್ದರು ಮಾತನಾಡಿಸಿದೆ. ಬಿಜೆಪಿ ನಾಯಕರು ಎದರುಗಡೆ ಸಿಕ್ಕರೆ ಮಾತನಾಡಿಸುವೆ ಇದರಲ್ಲಿ ಯಾವುದೇ ಒಳಒಪ್ಪಂದವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸೋಲಿನ ಭಯದಿಂದ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬದಾಮಿ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ರು.

ಇದೇ ವಿಚಾರವಾಗಿ ಮಾತನಾಡಿದ ಎಸ್.ಆರ್.ಪಾಟೀಲ್, ಒಂದೇ ಹೋಟೆಲ್ ನಲ್ಲಿ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ನನ್ನೊಂದಿಗೆ ಚಹಾ ಸೇವಿಸಿದ್ರು. ಭೇಟಿಯ ವೇಳೆ ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ಒಳ ಒಪ್ಪಂದದ ಚರ್ಚೆಯಾಗಿಲ್ಲ. ಹಳೆಯ ಸ್ನೇಹ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ನನ್ನನ್ನು ಭೇಟಿಯಾಗಿದ್ರು ಅಂತ ಪಾಟೀಲ್ ಸಮರ್ಥಿಸಿಕೊಂಡ್ರು.

Share This Article
Leave a Comment

Leave a Reply

Your email address will not be published. Required fields are marked *