ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

Public TV
3 Min Read

-ಸಿಹಿ ಹಿಂದಿದೆ ಕಹಿ ಸತ್ಯ

ಬೆಂಗಳೂರು: ಕುರುಕಲು ತಿಂಡಿ, ಸಿಹಿ ತಿಂಡಿ ಮಾಡೋದು ತುಂಬಾನೇ ಕಷ್ಟ ಎಂದು ಎಷ್ಟೋ ಜನರು ಅಂಗಡಿಗಳಿಂದ ತಂದು ಹಬ್ಬಕ್ಕೆ ಮುಗಿಸುತ್ತಾರೆ. ಬಹುತೇಕ ಗ್ರಾಹಕರು ಮಾರುಕಟ್ಟೆಯಲ್ಲಿ ಸಿಗುವ ತಿಂಡಿಗಳ ಗುಣಮಟ್ಟ ಪರೀಕ್ಷೆ ಮಾಡಲ್ಲ. ಸಿಹಿ ಹಿಂದಿನ ಕಹಿ ಸತ್ಯವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚಾರಣೆ ಮೂಲಕ ಬಟಾಬಯಲು ಮಾಡಿದೆ.

ಸಿಹಿ ಪದಾರ್ಥಗಳನ್ನು ತಯಾರಿಸುವ ಸ್ಥಳ ನೋಡಿದ್ರೆ ನಾವು ಈ ಆಹಾರವನ್ನ ಇಷ್ಟು ದಿನ ಬಾಯಿ ಚಪ್ಪರಿಸಿ ತಿನ್ನತ್ತಾ ಇದ್ದವಾ ಎಂದು ಶಾಕ್‍ಗೆ ಒಳಗಾಗ್ತೀರಿ. ಗ್ರಾಹಕರನ್ನು ತಮ್ಮ ಉತ್ಪನ್ನಗಳತ್ತ ಸೆಳೆಯಲು ವಿಷಕಾರಿ ಅಂಶಗಳನ್ನು ತಿಂಡಿಯಲ್ಲಿ ಸೇರಿಸಲಾಗುತ್ತದೆ. ತಿಂಡಿ ತಯಾರಿ ಸ್ಥಳ ಸ್ವಚ್ಛತೆ ಎಂಬ ಪದಕ್ಕೆ ಅರ್ಥವೇ ಇಲ್ಲ. ಆಹಾರ ತಯಾರಿಕರು ಸಹ ಯಾವುದೇ ಸ್ವಚ್ಛತೆ ಇಲ್ಲದೇ ತಿಂಡಿ ತಯಾರಿಸುವ ದೃಶ್ಯಗಳು ಪಬ್ಲಿಕ್ ಟಿವಿಯಲ್ಲಿ ಸೆರೆಯಾಗಿವೆ.

ರಿಯಾಲಿಟಿ ಚೆಕ್:1 ಸಿಹಿ ತಿನಿಸು
ಸ್ಥಳ: ಬಿನ್ನಿಮಿಲ್ ರೈಲ್ವೇ ರೋಡ್

ರಸವತ್ತಾದ ಬಾದುಶಾ, ಘಮಘಮ ಅನ್ನೋ ಲಡ್ಡು, ಕಟುಂ ಕಟುಂ ಅನ್ನೊ ಶೇಂಗಾ. ಅಹಾ ನೋಡುತ್ತಾ ಇದ್ದರೆ ಯಾರಿಗೆ ತಾನೆ ಬಾಯಲ್ಲಿ ನೀರು ಬರಲ್ಲ ಹೇಳಿ. ಬೆಂಗಳೂರಿನ ಬಿನ್ನಿಮಿಲ್ ರೈಲ್ವೇ ಟ್ರ್ಯಾಕ್‍ಗಳ ಹಿಂದೆ ಇರೋ ಸ್ಟಾರ್ ಸ್ವೀಟ್ಸ್ ಮಳಿಗೆಯಲ್ಲಿ ಇದಿಷ್ಟೇ ಅಲ್ಲಾ ಬಗೆಬಗೆಯ ಭೋಜನ, ಸ್ವೀಟ್ಸ್ ಎಲ್ಲದರ ದರ್ಶನವಾಗುತ್ತದೆ. ಬರೋಬ್ಬರಿ 60ಕ್ಕೂ ಹೆಚ್ಚು ಕಡೆಗಳ ಸಿಹಿ ತಿಂಡಿ ಇಲ್ಲಿ ತಯಾರಾಗುತ್ತದೆ. ನೊಡೋಕೆ ಅಂದವಾಗಿದೆ. ಆದರೆ ಇದನ್ನ ತಯಾರಿಸೊದು ನೋಡಿದ್ರೆ ನಿಮಗೆ ಸ್ವೀಟ್ಸ್‍ನ ಮೇಲೆ ರೇಜಿಗೆ ಹುಟ್ಟುತ್ತದೆ.

ಸ್ವಚ್ಛತೆ ಇಲ್ಲದ ನಲ್ಲಿ ನೀರು, ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಪಾಚಿ ಕಟ್ಟಿನಿಂತಿದೆ. ಕೊಳೆಯಾಗಿರೊ ಪ್ಲಾಸ್ಟಿಕ್ ಬಿಂದಿಗೆ ಮೂಲಕವೇ ತಿಂಡಿ ತಯಾರಿಕೆಗೆ ನೀರು ಪೂರೈಸಲಾಗುತ್ತದೆ. ಅಲ್ಲಿರುವ ಗ್ರೈಂಡರ್ ತೊಳೆದು ಅದೆಷ್ಟೋ ದಿನ ಆಯ್ತು ನೀವು ಲೆಕ್ಕ ಹಾಕಬೇಕು. ಇಷ್ಟು ಮಾತ್ರವಲ್ಲದೇ ಹದವಾದ ಹಿಟ್ಟನ್ನ ಉಂಡೆ ಮಾಡುವ ಕಾರ್ಮಿಕರು ತಮ್ಮ ಮೈ ಬೆವರನ್ನ ಹಿಂಡಿ ತಿಂಡಿಗೆ ಬೆರಸಿ ಅಡುಗೆ ಸಿದ್ಧ ಮಾಡ್ತಾರೆ. ಅದನ್ನ ನಾವು ನೀವು ಬಾಯಿ ಚಪ್ಪರಿಸಿ ತಿನ್ನುತ್ತೇವೆ. ಕೆ.ಆರ್ ಮಾರುಕಟ್ಟೆ ಮಿಲ್‍ಗಳಲ್ಲಿ ಸಿಗುವ ಎಣ್ಣೆ ಎಂದು ಹೇಳಿ ಕಳಪೆ ಮಟ್ಟದ ಎಣ್ಣೆಯನ್ನ ಬಳಸುತ್ತಾರೆ. ಇಲ್ಲಿಯವರೇ ಬೆಂಗಳೂರಿನ ಬಹುತೇಕ ಸ್ವೀಟ್ ಮಾರ್ಟ್ ಗಳಿಗೆ ತಿಂಡಿಯನ್ನು ರವಾನಿಸುತ್ತಾರೆ.

ರಿಯಾಲಿಟಿ ಚೆಕ್:2 – ಖಾರದ ತಿಂಡಿ
ಸ್ಥಳ: ಕೆ.ಪಿ ಅಗ್ರಹಾರ

ಮಸಾಲೆ ಶೇಂಗಾ ಬೀಜ ತಿನ್ನದೇ ಇರೋರು ಉಂಟಾ? ಕಡಲೆ ಬೀಜವನ್ನು ಬಡವರ ಬಾದಾಮಿ ಅಂತಾ ಕರಿತಾರೆ. ಆದರೆ ಅದು ತಯಾರಾಗೊದು ನೋಡಿದರೆ ಇನ್ನ್ಮುಂದೆ ನೀವು ಅದನ್ನ ತಿನ್ನೋ ಧೈರ್ಯ ಮಾಡಲ್ಲ. ಕೊಳೆಮೆತ್ತ ಕೈಯಲ್ಲಿ ತಿರುಗಿಸಿ ತಿರುಗಿಸಿ ಮಸಾಲೆ ಹಾಕ್ತಾರೆ. ಇದಕ್ಕೆ ನೀರು ಹಾಕಲು ಬಳಸುವ ಪ್ಲಾಸ್ಟಿಕ್ ಮಗ್ ನೋಡಿದ್ರೆ ವಾಕರಿಕೆ ಬರೋದು ಗ್ಯಾರೆಂಟಿ. ಈ ಮಧ್ಯೆ ಒಲೆ ಉರಿಸಲು ಕಟ್ಟಿಗೆ ಹೊಟ್ಟು ಬೇರೆ ತಂದು ಹಾಕಿದ್ದಾರೆ. ಈ ಧೂಳು ನೇರವಾಗಿ ಪಕ್ಕದಲ್ಲಿಯೇ ತಯಾರುಗುವ ತಿಂಡಿಯಲ್ಲಿ ಸೇರುತ್ತದೆ.

ಇದೇ ಏರಿಯಾದಲ್ಲಿ ಕೇವಲ ಒಂದು ರೂಪಾಯಿಗೆ ಸಂಡಿಗೆ, ಬರ್ಫಿಗಳು ಸಿಗುತ್ತದೆ. ಒಟ್ಟು 60 ಕಡೆಗಳಲ್ಲಿ ಈ ಕಂಪನಿ ನಡೆಯುತ್ತಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಈ ಪರಿಯ ಡರ್ಟಿ ಫುಡ್ ರೆಡಿಯಾಗುತ್ತದೆ.

ಈ ರೀತಿಯ ಆಹಾರ ಸೇವನೆ ಮಾಡುವರಿಂದ ನ್ಯೂಮೆನಿಯಾ, ಹೊಟ್ಟೆ ನೋವು ಸೇರಿದಂತೆ ರೋಗಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿರಕರು ಮಾರುಕಟ್ಟೆಯಲ್ಲಿ ತಿಂಡಿಯನ್ನು ಖರೀದಿಸುವ ಮುನ್ನ ಗುಣಮಟ್ಟತೆಯನ್ನು ಪರೀಕ್ಷಿಸಬೇಕು. ಈ ರೀತಿಯ ಕಲಬೆರಕೆ ಆಹಾರ ಸೇವನೆಯಿಂದ ಮಕ್ಕಳ ಬೆಳವಣಿಗೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ತಿಂಡಿ ಮಾಡಿ ಕೊಡುವುದು ಉತ್ತಮ ಎಂದು ಆಹಾರ ತಜ್ಞ ರಘು ಹೇಳುತ್ತಾರೆ.

https://www.facebook.com/publictv/videos/762906560806201/

Share This Article
Leave a Comment

Leave a Reply

Your email address will not be published. Required fields are marked *