ಉಪ್ಪಿ ಬರ್ತ್ ಡೇಗೆ ಭರ್ಜರಿ ಗಿಫ್ಟ್ ಕೊಡಲಿದ್ದಾನೆ ನಟಭಯಂಕರ!

Public TV
1 Min Read

ಬೆಂಗಳೂರು: ಪ್ರಥಮ್ ತನ್ನ ಪ್ರಧಾನ ಆಸಕ್ತಿಗನುಗುಣವಾಗಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸುತ್ತಿರುವ ಚಿತ್ರ ನಟಭಯಂಕರ. ನಿರ್ದೇಶಕನಾಗಿ ತನ್ನ ಕಸುವೇನೆಂಬುದನ್ನು ಪ್ರೂವ್ ಮಾಡಲು ಹೊರಟಿರೋ ಪ್ರಥಮ್ ಈ ಬಗೆಗಿನ ಪ್ರತೀ ಹೆಜ್ಜೆಯನ್ನೂ ಸಂಚಲನ ಸೃಷ್ಟಿಸುವಂತೆಯೇ ಇಡುತ್ತಾ ಬಂದಿದ್ದಾರೆ. ಇದೀಗ ಅವರ ಇಂಥಾ ಉತ್ಸಾಹಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಜೊತೆಯಾಗಿದ್ದಾರೆ. ನಟಭಯಂಕರ ಚಿತ್ರದ ಹೀರೋನನ್ನು ಪರಿಚಯಿಸೋ ಹೈವೋಲ್ಟೇಜ್ ಹಾಡೊಂದನ್ನು ಉಪ್ಪಿ ಥ್ರಿಲ್ ಆಗಿಯೇ ಹಾಡಿದ್ದಾರೆ. ಎಂಥವರೂ ಖುಷಿಗೊಂಡು ಕುಣಿದಾಡುವಂತೆ ಮೂಡಿ ಬಂದಿರೋ ಈ ಹಾಡನ್ನು ಉಪ್ಪಿ ಬರ್ತ್ ಡೇಯಂದು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ರಿಯಲ್ ಸ್ಟಾರ್ ಹುಟ್ಟಿದ ದಿನವೆಂಬುದು ಅಭಿಮಾನಿಗಳ ಪಾಲಿಗೆ ಹಬ್ಬದಂತೆಯೇ ಆಚರಿಸಲ್ಪಡುತ್ತಾ ಬಂದಿದೆ. ಆದರೆ ಈ ಬಾರಿ ನಟ ಭಯಂಕರ ಚಿತ್ರತಂಡ ಅದನ್ನು ಮತ್ತಷ್ಟು ಮಜವಾದ ಸಂಭ್ರಮವಾಗಿಸುವ ನಿಟ್ಟಿನಲ್ಲಿ ಈ ಹಾಡನ್ನು ಖುದ್ದು ಉಪ್ಪಿ ಕೈಯಲ್ಲೇ ಬಿಡುಗಡೆಗೊಳಿಸಲು ತೀರ್ಮಾನಿಸಿದೆ. ಉಪ್ಪಿ ಕೂಡಾ ಈ ಹಾಡಿನ ಸಾಹಿತ್ಯ ಮತ್ತು ಸಂಗೀತವನ್ನು ಬಹುವಾಗಿ ಮೆಚ್ಚಿ ಬೆನ್ತಟ್ಟುತ್ತಲೇ ಈ ಹಾಡನ್ನು ಹಾಡಿದ್ದಾರೆ. ಇದು ಮಾಮೂಲಿಯಾದ ಹಾಡಲ್ಲ. ನಾಯಕನ ಇಂಟ್ರಡಕ್ಷನ್ ಸಾಂಗುಗಳ ಸಾಲಿನಲ್ಲಿಯೇ ವಿಭಿನ್ನವಾಗಿ ನಿಲ್ಲುವಂತೆ ಮೂಡಿ ಬಂದಿರೋ ಈ ಲಿರಿಕಲ್ ಸಾಂಗ್ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಲಿದೆ.

ಆರಂಭದಿಂದಲೂ ಉಪ್ಪಿ ನಟಭಯಂಕರ ಚಿತ್ರದ ಬಗ್ಗೆ ಗಮನಹರಿಸುತ್ತಾ, ಅದರ ಬಗೆಗಿನ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದರಂತೆ. ಇತ್ತೀಚೆಗೆ ಪ್ರಥಮ್ ಸೇರಿದಂತೆ ಚಿತ್ರತಂಡವನ್ನು ಮನೆಗೇ ಕಡೆಸಿಕೊಂಡು ಮೇಕಿಂಗ್ ಮತ್ತು ಹಾಡುಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದು ನಿರ್ದೇಶಕನಾಗಿಯೂ ಗೆಲುವು ದಾಖಲಿಸೋ ಭರವಸೆಯನ್ನು ಪ್ರಥಮ್‍ರಲ್ಲಿ ಮೂಡಿಸಿದೆ. ಇನ್ನುಳಿದಂತೆ ಈ ಹಾಡನ್ನೂ ಕೂಡಾ ಪರ್ಸನಲ್ ಆಗಿ ಉಪ್ಪಿ ತುಂಬಾನೇ ಮೆಚ್ಚಿಕೊಂಡಿದ್ದಾರಂತೆ. ಅದೇ ಖುಷಿಯಲ್ಲಿಯೇ ಅವರು ಹಾಡಿದ್ದಾರೆ. ಈ ಕಾರಣದಿಂದಲೇ ಸದರಿ ಹಾಡಿನ ಬಗ್ಗೆ ಪ್ರಥಮ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಲಿರಿಕಲ್ ಸಾಂಗ್ ಉಪ್ಪಿ ಅಭಿಮಾನಿಗಳ ಪಾಲಿಗೆ ಮಾತ್ರವಲ್ಲದೆ ಸಮಸ್ತ ಪ್ರೇಕ್ಷಕರಿಗೂ ಹಬ್ಬದಂತೆ ಮೂಡಿ ಬಂದಿದೆಯೆಂಬ ಆತ್ಮವಿಶ್ವಾಸ ಚಿತ್ರತಂಡದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *