ಚಾಂಪಿಯನ್ಸ್ ಲೀಗ್: ರಿಯಲ್ ಮ್ಯಾಡ್ರಿಡ್‍ಗೆ ಹ್ಯಾಟ್ರಿಕ್ ಕಿರೀಟ

Public TV
2 Min Read

ಕೀವ್: ತೀವ್ರ ಕುತೂಹಲ ಕೆರಳಿಸಿದ್ದ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಿಯಲ್ ಮ್ಯಾಡ್ರಿಡ್, ಇಂಗ್ಲಿಷ್ ಕ್ಲಬ್ ಲಿವರ್‍ ಪೂಲ್ ತಂಡವನ್ನು 3-1 ಗೋಲುಗಳಿಂದ ಮಣಿಸಿದೆ. ಆ ಮೂಲಕ ಸತತ ಮೂರನೇ ಬಾರಿಯೂ ಚಾಂಪಿಯನ್ಸ್ ಕಿರೀಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಈ ಗೆಲುವಿನ ಮೂಲಕ ಸರ್ಗಿಯೋ ರಾಮೋಸ್ ನೇತೃತ್ವದ ಮ್ಯಾಡ್ರಿಡ್ ತಂಡ, ಯುರೋಪಿಯನ್ ಕಪ್ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿಯನ್ನು ಸತತ ಮೂರು ಬಾರಿ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ರಿಯಲ್ ಮ್ಯಾಡ್ರಿಡ್‍ನ ಸ್ಟಾರ್ ಆಟಗಾರ ಗರೆಥ್ ಬೇಲ್, ನಂಬಲಸಾಧ್ಯ ಬೈಸಿಕಲ್ ಕಿಕ್ ಸೇರಿದಂತೆ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂತಿಮ ಹಣಾಹಣಿಯ ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಬಿರುಸಿನ ಆಟ ಕಂಡು ಬಂದರೂ, ಗೋಲು ಬಲೆಯನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಪಂದ್ಯದ 30ನೇ ನಿಮಿಷದಲ್ಲಿ ಸ್ಟಾರ್ ಸ್ಟ್ರೈಕರ್ ಮೊಹಮ್ಮದ್ ಸಲಾಹ್ ಗಾಯಗೊಂಡು ನಿವೃತ್ತರಾಗಿದ್ದು, ಲಿವರ್‍ಪೂಲ್ ತಂಡಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡಿತು. ಎದುರಾಳಿ ತಂಡದ ನಾಯಕ ರಾಮೋಸ್ ಉದ್ದೇಶಪೂರ್ವಕವಾಗಿ ಸಲಾಹ್‍ರನ್ನು ನೆಲಕ್ಕೆ ಬೀಳಿಸಿದ್ದು ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಕಣ್ಣೀರಿಡುತ್ತಲೇ ಸಲಾಹ್ ಮೈದಾನದಿಂದ ಹೊರನಡೆದರು. ಪ್ರಸಕ್ತ ಸಾಲಿನಲ್ಲಿ 44 ಗೋಲುಗಳಿಸಿದ್ದ ಸಲಾಹ್, ಫೈನಲ್‍ನಲ್ಲಿ ಮ್ಯಾಡ್ರಿಡ್‍ಗೆ ಕಠಿಣ ಸವಾಲು ಒಡ್ಡಲಿದ್ದಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಕೆಟ್ಟ ಆಟದ ಮೂಲಕ ಮ್ಯಾಡ್ರಿಡ್ ನಾಯಕ ಸಲಾಹ್ ಸವಾಲ್‍ಗೆ ಬ್ರೇಕ್ ಹಾಕಿದರು.

ಪಂದ್ಯದ ದ್ವಿತಿಯಾರ್ಧದ 50ನೇ ನಿಮಿಷದಲ್ಲಿ ಕರೀಂ ಬೆನ್ಜೆಮಾ ಗೋಲುಗಳಿಸಿ ರಿಯಲ್ ಮ್ಯಾಡ್ರಿಡ್ ಪರ ಗೋಲಿನ ಖಾತೆ ತೆರೆದರು. ಇದಾದ 4ನೇ ನಿಮಿಷದಲ್ಲಿ ಸಡಿಯೋ ಮಾನೆ ಗೋಲಿನ ಮೂಲಕ ಲಿವರ್‍ಪೂಲ್ ಸಮಬಲ ಸಾಧಿಸಿತು. ಆದರೆ ರಿಯಲ್ ಮ್ಯಾಡ್ರಿಡ್ ಪರ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಗರೇತ್ ಬೇಲ್ 63ನೇ ನಿಮಿಷದಲ್ಲಿ ಅತ್ಯಾಕರ್ಷಕ ಗೋಲು ಬಾರಿಸಿ, ರಿಯಲ್ ಮ್ಯಾಡ್ರಿಡ್‍ಗೆ ಮುನ್ನಡೆ ತಂದುಕೊಟ್ಟರು. ಪಂದ್ಯ ಮುಗಿಯಲು ಏಳು ನಿಮಿಷಗಳಿದ್ದಾಗ ಲಿವರ್‍ಪೂಲ್ ಗೋಲ್ ಕೀಪರ್ ಲಾರಿಸ್ ಕರಿಯೂಸ್ ಮಾಡಿದ ಪ್ರಮಾದದ ಸದುಪಯೋಗ ಪಡೆದುಕೊಂಡ ವೇಲ್ಸ್‍ಮನ್, ದೂರದಿಂದ ಚೆಂಡನ್ನು ಗೋಲು ಬಲೆಯೊಳಗೆ ಸೇರಿಸಿ ತಂಡಕ್ಕೆ ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಜೊತೆಗೆ 13ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲಲು ನೆರವಾದರು.

1974 ಹಾಗೂ 1976ರಲ್ಲಿ ಜರ್ಮನ್ ಕ್ಲಬ್ ಬಯಾರ್ನ್ ಮ್ಯೂನಿಚ್ ಸತತ ಮೂರು ಬಾರಿ ಪ್ರಶಸ್ತಿ ಗೆದ್ದ ಬಳಿಕ ಈ ಸಾಧನೆ ಮಾಡಿದ ಏಕೈಕ ತಂಡ ಎಂಬ ಖ್ಯಾತಿಗೆ ರಿಯಲ್ ಮ್ಯಾಡ್ರಿಡ್ ಪಾತ್ರವಾಯಿತು. ರಿಯಲ್ ಮ್ಯಾಡ್ರಿಡ್ ತಂಡದ ಮ್ಯಾನೇಜರ್ ಝೈನುದ್ದೀನ್ ಜಿದಾನೆ, ಸತತ ಎರಡು ಬಾರಿ ತಂಡಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮತ್ತೊಂದೆಡೆ ಲಿವರ್‍ಪೂಲ್‍ನ ಮ್ಯಾನೇಜರ್ ಜರ್ಗನ್ ಕ್ಲೊಪ್ ಅವರು ಏಳು ಪ್ರಮುಖ ಫೈನಲ್‍ಗಳಲ್ಲಿ 6 ಫೈನಲ್‍ನ್ನೂ ಕಳೆದುಕೊಂಡಿದ್ದಾರೆ. 2012ರಲ್ಲಿ ಬೊರುಸಿಯಾ ಡಾರ್ಟ್‍ಮಂಡ್ ವಿರುದ್ಧ ಡಿಎಫ್‍ಬಿ ಪೊಕಲ್ ಪ್ರಶಸ್ತಿ ಗೆದ್ದ ಬಳಿಕ ಮತ್ತೆ ಕ್ಲೊಪ್ ಪ್ರಮುಖ ಫೈನಲ್ ಗೆದ್ದಿಲ್ಲ. ಹೀಗಾಗಿ ಚಾಂಪಿಯನ್ಸ್ ಲೀಗ್‍ನಲ್ಲಿ ಇಂಗ್ಲೀಷ್ ಕ್ಲಬ್‍ಗಳ ಮೇಲೆ ಸ್ಪ್ಯಾನೀಷ್ ತಂಡಗಳ ಪ್ರಾಬಲ್ಯ ಮುಂದುವರೆದಿದೆ. ಕಳೆದ ಏಳು ಯುಇಎಫ್‍ಎ ಕ್ಲಬ್ ಪೈಪೋಟಿಯಲ್ಲಿ ಇಂಗ್ಲೀಷ್ ಕ್ಲಬ್‍ಗಳು ಪ್ರಶಸ್ತಿ ಗೆಲ್ಲಲು ವಿಫಲವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *