ರಿಯಲ್ ಹೀರೋ, ಡಚ್ ನಾಯಿಗೆ ಸೇನೆಯಿಂದ ಸಂತಾಪ- ಸಾಮಾಜಿಕ ಜಾಲತಾಣಗಳಲ್ಲೂ ಹರಿದು ಬಂತು ಗೌರವ

Public TV
1 Min Read

ನವದೆಹಲಿ: ಸುಧಾರಿತ ಬಾಂಬ್‍ಗಳ ಪತ್ತೆ, ಭಯೋತ್ಪಾದನಾ ಕಾರ್ಯಾಚರಣೆ ವೇಳೆ ಸ್ಫೋಟಕಗಳನ್ನು ಗುರುತಿಸಲು ಸಹಾಯ ಮಾಡಿದ ‘ಡಚ್’ ಹೆಸರಿನ ನಾಯಿಯ ಸಾವಿಗೆ ಭಾರತೀಯ ಸೇನೆಯ ಪೂರ್ವ ಕಮಾಂಡ್ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಡಚ್‍ನ ಶೌರ್ಯವನ್ನು ನೆನೆದಿದೆ. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಂತಾಪಗಳ ಮಹಾಪೂರವೇ ಹರಿದಿದೆ.

ಡಚ್ 9 ವರ್ಷದ ನಾಯಿಯಾಗಿದ್ದು, ಬುಧವಾರ ಸಾವನ್ನಪ್ಪಿತ್ತು. ಬಾಂಬ್ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳನ್ನು ಪತ್ತೆ ಹಚ್ಚುವಲ್ಲಿ ಸೇನೆಗೆ ಅಗಾದ ಸಹಾಯವನ್ನು ಡಚ್ ಮಾಡಿದೆ. ನಾಯಿಯ ಸೇವೆಯನ್ನು ನೆನೆದು, ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಿಜವಾದ ಹೀರೋ ನಮ್ಮ ಡಚ್ ಎಂದು ಈಸ್ಟರ್ನ್ ಕಮಾಂಡ್ ನಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಗಳನ್ನು ಟ್ವೀಟ್ ಮಾಡಿದೆ. ಸೇನೆ ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಸಂತಾಪ ಸೂಚಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಅತ್ಯಂತ ದುಃಖದ ಪೋಸ್ಟ್ ಆಗಿದ್ದರೂ, ಧೈರ್ಯಶಾಲಿ ನಾಯಿಗಳಿಗೆ ಮನುಷ್ಯರಷ್ಟೇ ಸಮಾನ ಗೌರವ ನೀಡುವ ಅತ್ಯುತ್ತಮ ಪೋಸ್ಟ್ ಆಗಿದೆ. ಈ ಗ್ರಹದಲ್ಲಿ ಪ್ರತಿಯೊಂದು ಜೀವರಾಶಿಗೂ ಸೂಕ್ತ ಸ್ಥಾನಮಾನವಿದೆ. ಅಗತ್ಯವಿದ್ದಾಗ ನಾವು ಅವುಗಳಿಗೆ ಸೂಕ್ತ ಗೌರವವನ್ನೂ ಸಲ್ಲಿಸುತ್ತೇವೆ. ಅದೇ ರೀತಿ ಈ ಪೋಸ್ಟ್ ನೋಡಿ ತುಂಬಾ ಖುಷಿಯಾಗಿದೆ ಎಂದು ಹಲವರು ಸೇನೆಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವರು ‘ಗೆಳೆಯನೇ ನಿನ್ನ ಪ್ರಯಾಣ ಸುಖಕರವಾಗಿರಲಿ’ ಎಂದು ಕಮೆಂಟ್ ಮಾಡಿದ್ದಾರೆ. ಭಾರತೀಯ ಸೇನೆಯ ಏಳು ಕಾರ್ಯಾಚರಣೆ ಕಮಾಂಡ್‍ಗಳ ಪೈಕಿ ಈಸ್ಟರ್ನ್ ಕಮಾಂಡ್ ಸಹ ಒಂದಾಗಿದೆ. ಇದರ ಪ್ರಧಾನ ಕಚೇರಿ ಕೋಲ್ಕತಾದ ಫೋರ್ಟ್ ವಿಲಿಯಂನಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *