ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

Public TV
2 Min Read

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

ನನ್ನ ಹೊಟ್ಟೆಗೆ ವಿಷ ಪ್ರಸಾದ ಸೇರಿದೆ ಅಂತ ಗೊತ್ತಿದ್ರೂ ನನ್ನ ಮಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದೆ. ಆದ್ರೆ ಕೊನೆಗೂ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೇ ಆಕೆಯ ಅಂತ್ಯಕ್ರಿಯೆಗೆ ಹೋಗುವ ಅವಕಾಶವನ್ನೂ ದೇವರು ನನಗೆ ನೀಡಿಲ್ಲ ಅಂತ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದಾರೆ.

ಪುಟ್ಟಸ್ವಾಮಿ ಹೇಳಿದ್ದೇನು..?
ನಾನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಮಗಳು ನನ್ನ ನೋಡಲು ಬಂದಿದ್ದಳು. ಬೆಳಗ್ಗೆ ಗುದ್ದಲಿ ಪೂಜೆ ಇತ್ತು. ಆದ್ದರಿಂದ ಅಡುಗೆಗೆ ಸ್ವಲ್ಪ ಸಹಾಯ ಮಾಡಿದೆ. ಅಡುಗೆ ಆದ ಬಳಿಕ ನನ್ನ ಮಗಳು ಊಟ ಮಾಡಿದ್ದಾಳೆ. ಅವಳ ಊಟದಲ್ಲಿ ಅರ್ಧ ಉಳಿದಿತ್ತು. ಆವಾಗ ಆಕೆ ಅಪ್ಪ ನನಗೆ ಬೇಡ ನನಗೆ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳಿದಳು. ನಾನೂ ಊಟ ಮಾಡಿದೆ ಅಂತ ಪುಟ್ಟಸ್ವಾಮಿ ಹೇಳಿದ್ರು.

ಸ್ವಲ್ಪ ಹೊತ್ತು ಬಳಿಕ ನನ್ನ ಮಗಳು ಬಿದ್ದು ಒದ್ದಾಡುತ್ತಿದ್ದಳು. ಮಗಳು ಯಾಕೆ ಬಿದ್ದು ಒದ್ದಾಡುತ್ತಿದ್ದಾಳೆ ಅಂತ ಊರಿನ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಬೇರೆ ಕಡೆ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಅಂದ್ರು. ಆದ್ರೆ ನಾನು ಬರುವಾಗಲೇ ಅಂಬುಲೆನ್ಸ್ ಹೊರಟಿತ್ತು. ಹೀಗಾಗಿ ನಾನು ಬೈಕಿನಲ್ಲಿ ಆಕೆಯನ್ನು ಸುಳ್ವಾಡಿಯಿಂದ 15 ಕಿ.ಮೀ ದೂರದಲ್ಲಿರುವ ರಾಮಾಪುರಕ್ಕೆ ಕರೆದುಕೊಂಡು ಬಂದೆ ಅಂತ ತಮ್ಮ ದುಃಖ ತೋಡಿಕೊಂಡರು.

ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದಾಗ ನನ್ನ ಹೊಟ್ಟೆಯೂ ತೊಳೆಸಿದಂತೆ ಆಗುತ್ತಿತ್ತು. ಆದ್ರೆ ಮೊದಲು ನನ್ನ ಮಗಳು ಚೆನ್ನಾಗಿರಬೇಕು. ನನಗೆ ಏನಾದ್ರೂ ಪರವಾಗಿಲ್ಲ. ಹೀಗಾಗಿ ಫಸ್ಟ್ ಮಗಳನ್ನು ತೋರಿಸಿ ಆಮೇಲೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಅಂತ ಯೋಚಿಸಿದೆ. ಅದುವರೆಗೂ ನನ್ನ ಬಗ್ಗೆ ಯಾರ ಜೊತೆನೂ ಹೇಳಿಕೊಂಡಿಲ್ಲ. ಎಲ್ಲರ ಬಳಿಯೂ ನಾನು ಚೆನ್ನಾಗಿದ್ದೇನೆ ಅಂತಾನೇ ಹೇಳುತ್ತಾ ಬಂದೆ. ಆದ್ರೆ ಹೊಟ್ಟೆ ತೊಳೆಸುತ್ತಾ ಇತ್ತು. ವಾಂತಿ ಬರುವಂತೆ ಆಗುತ್ತಿತ್ತು. ನನ್ನ ಚಲನವಲನ ಕಂಡು ಸ್ಥಳೀಯರು ನೀನು ಮೊದಲು ಗಾಡಿ ಹತ್ತು ಅಂತ ಹೇಳುತ್ತಿದ್ದರು. ಆವಾಗ ನಾನು, ನನ್ನ ಮಗಳೇ ಹಿಂಗೆ ಇರುವಾಗ ನಾನು ಫಸ್ಟ್ ಗಾಡಿ ಹತ್ತಿ ಏನು ಮಾಡಲಿ ಅಂತ ಪ್ರಶ್ನಿಸಿದೆ. ನನಗೆ ಆಗಲೇ ತುಂಬಾ ಬೇಜಾರಾಗುತ್ತಿತ್ತು ಅಂತ ದುಃಖಿತರಾದ್ರು.

ಕೊನೆಗೆ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು. ಆಕೆ ತೀರಿಕೊಂಡ ನಂತರ ನಾನು ಸತ್ತು ಹೋಗುತ್ತೆನೋ ಅಂತ ನನಗೂ ಹೊಟ್ಟೆ ತೊಳೆಸುತ್ತೆ, ವಾಂತಿ ಬಂದಂಗೆ ಆಗುತ್ತಿದೆ ಅಂತ ಹೇಳಿಕೊಂಡೆ. ಆಮೇಲೆ ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿ ಗದ್ಗದಿತರಾದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *