ಸುಪ್ರೀಂ ತೀರ್ಪು: ರಾಜಕೀಯ ನಾಯಕರು ಹೇಳಿದ್ದು ಏನು?

Public TV
2 Min Read

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂನಿಂದ ಕರ್ನಾಟಕಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು, ರಾಜ್ಯಕ್ಕೆ ಹೆಚ್ಚುವರಿಯಾಗಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ. ತೀರ್ಪು ಕೇಳಿ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ನಮ್ಮ ವಕೀಲರ ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡುತ್ತೇನೆ. 192 ಟಿಎಂಸಿಯಲ್ಲಿ 20 ಟಿಎಂಸಿ ನೀರು ಕಡಿತ ಮಾಡಿದೆ. ಇದು ನಮಗೆ ಅನುಕೂಲ. ಸಂಪೂರ್ಣ ಮಾಹಿತಿ ವಕೀಲರ ಬಳಿ ಪಡೆದು ಮಾತನಾಡುತ್ತೇನೆ ಎಂದು ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಕಾವೇರಿ ತೀರ್ಪು ಕಳೆದ ತೀರ್ಪಿಗಿಂತ ಉತ್ತಮವಾಗಿದೆ. ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಬ್ರಿಟಿಷ್ ಕಾಲದ ತೀರ್ಪು ಬದಲಾವಣೆ ಆಗಿಲ್ಲ ಎನ್ನುವುದು ದುರಂತ. ನಮ್ಮ ನಿರೀಕ್ಷೆ ಇನ್ನು ಹೆಚ್ಚಿತ್ತು. 40 ಟಿಎಂಸಿ ನೀರು ಸಿಗುವ ನಿರೀಕ್ಷೆ ಇತ್ತು. ಆದರೆ ಈ ತೀರ್ಪು ತೃಪ್ತಿ ತಂದಿಲ್ಲ. ವಕೀಲರು ಉತ್ತಮವಾಗಿ ವಾದ ಮಾಡಿದ್ದಾರೆ. ತೀರ್ಪು ನಮ್ಮ ನಿರೀಕ್ಷೆಯಂತೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

ಕಾವೇರಿ ತೀರ್ಪು ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಕಾನೂನು ಸಚಿವ ಜಯಚಂದ್ರ ಪ್ರತಿಕ್ರಿಯೆ ನೀಡಿ ಸುಪ್ರೀಂ ತೀರ್ಪು ಆಶಾದಾಯಕ ಬೆಳವಣಿಗೆ. ನಮ್ಮ ನಿರೀಕ್ಷೆ ಇನ್ನು ಹೆಚ್ಚಿತ್ತು. ಪೂರ್ತಿ ತೀರ್ಪು ಓದಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಸ್ವಲ್ಪ ಮಟ್ಟಿಗೆ ಕರ್ನಾಟಕಕ್ಕೆ ಖುಷಿ ನೀಡಿದೆ. ಮೈಸೂರು, ಮಂಡ್ಯ ಜನರಿಗೆ ಹೆಚ್ಚು ಖುಷಿ ನೀಡಿದೆ. ಬೆಂಗಳೂರಿನ ಜನತೆಗೆ ಹೆಚ್ಚು ನೀರು ನೀಡಿರೋದು ಖುಷಿ ವಿಚಾರ. ನಮ್ಮ ನಿರೀಕ್ಷೆಯಷ್ಟು ನೀರು ಸಿಕ್ಕಿಲ್ಲ. ಸ್ವಲ್ಪ ಮಟ್ಟಿಗೆ ನೆಮ್ಮದಿಯ ತೀರ್ಪು ಇದಾಗಿದೆ. ಕೋರ್ಟ್‍ನ ಒಳಗೆ ಹೊರಗೆ ಹೋರಾಟ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಗೃಹಸಚಿವ ಆರ್. ಅಶೋಕ್ ಸಲಹೆ ನೀಡಿದ್ದಾರೆ.

ಈ ತೀರ್ಪು ಮೇಲ್ನೋಟಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮ ನಿರೀಕ್ಷೆಯಷ್ಟು ತೀರ್ಪು ಬಂದಿಲ್ಲ. ನಿರ್ವಹಣಾ ಮಂಡಳಿಯ ತೀರ್ಪು ಸ್ವಾಗತ ಮಾಡುತ್ತೇವೆ. ಕೃಷಿ ಪ್ರದೇಶ ಹೆಚ್ಚುವರಿ ಹೆಚ್ಚಳದ ತೀರ್ಪು ಸ್ವಾಗತಾರ್ಹ. ಹೆಚ್ಚುವರಿ ನೀರಿನ ಬಗ್ಗೆ ಕಾನೂನಾತ್ಮಕ ಹೋರಾಟ ಮುಂದುವರೆಸಬೇಕು. 100% ಸಮಾಧಾನವಾಗದೇ ಇದ್ದರೂ ಮೇಲ್ನೋಟಕ್ಕೆ ಸಮಾಧಾನ ತಂದಿದೆ. ಹಿಂದಿನ ಸುಪ್ರೀಂ ತೀರ್ಪುಗಳು ನಮ್ಮ ವಿರುದ್ಧವೇ ಬರುತ್ತಿತ್ತು. ಆದರೆ ಇವತ್ತಿನ ತೀರ್ಪು ಹಿಂದಿನ ತೀರ್ಪಿಗಿಂತ ಸಮಾಧಾನ ತಂದಿದೆ. ತೀರ್ಪು ಪೂರ್ತಿ ಓದಿ ರಿಯಾಕ್ಷನ್ ಕೊಡುತ್ತೇನೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *