ಬಿಗ್ ಬಾಸ್ ಮನೆಗೆ ಬೀಗ; ಮಾಜಿ ಸ್ಪರ್ಧಿಗಳು ತೀವ್ರ ಬೇಸರ

Public TV
2 Min Read

– ರಾಜಕೀಯ ದುರುದ್ದೇಶ ಎಂದ ಪ್ರಶಾಂತ್ ಸಂಬರಗಿ

ರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್‌ಬಾಸ್ (Bigg Boss) ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಬಿದ್ದಿತ್ತು. ಈ ಹಿನ್ನೆಲೆ ಜಾಲಿವುಡ್ ಸ್ಟುಡಿಯೋದಿಂದ ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಶೋ ಸ್ಥಗಿತಗೊಂಡ ಬಗ್ಗೆ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳು ಬೇಸರ ಹೊರಹಾಕಿದ್ದಾರೆ.

ರಾಜಕೀಯ ದುರುದ್ದೇಶ: ಪ್ರಶಾಂತ್ ಸಂಬರಗಿ
ಜಾಲಿವುಡ್‌ಗೆ ಬೀಗ ಬಿದ್ದ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashanth Sambargi) ಮಾತನಾಡಿ, ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಕಳೆದ ಬಾರಿ ಹುಲಿ ಉಗುರಿನ ಕಥೆ ಹೇಳಿ ವರ್ತೂರ್ ಸಂತೋಷ್‌ರನ್ನ ಬಂಧನ ಮಾಡಲಾಗಿತ್ತು. ನಾವು ಸ್ಪರ್ಧಿಯಾಗಿದ್ದಾಗಲು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ರೋಲ್ ಕಾಲ್ ಮಾಡಿಕೊಂಡಿದ್ದನ್ನ ನೋಡಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಏಜೆಂಟ್‌ಗಳಾಗಿರುವ ನಕಲಿ, ಡೋಂಗಿ ಕನ್ನಡ ಹೋರಾಟಗಾರರ ದೂರಿನ ಮೇಲೆ ಕ್ರಮ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಸ್ಪರ್ಧಿಗಳು ನೂರಾರು ಕನಸು ಕಟ್ಟಿಕೊಂಡು ಬಂದಿರ್ತಾರೆ: ಶಿಶಿರ್ ಶಾಸ್ತ್ರಿ
ಬಿಗ್‌ಬಾಸ್ 11ರ ಸ್ಪರ್ಧಿ ಶಿಶಿರ್ ಶಾಸ್ತ್ರಿ (Shishir Shastry) ಮಾತನಾಡಿ, ಶೋ ಹೀಗೆ ಸಡನ್ ಆಗಿ ನಿಂತಿರೋದು ತುಂಬಾ ಬೇಸರ ತಂದಿದೆ. 3 ತಿಂಗಳು ನಡೆಯುವ ಶೋ ಆಗಿರುವ ಬಿಗ್‌ಬಾಸ್‌ನಲ್ಲಿ ನೂರಾರು ಕಾರ್ಮಿಕರ ಶ್ರಮ ಇದೆ. ಶೋ ನಿಂತಿರೋದ್ರಿಂದ ಅವ್ರ ಜೀವನವೂ ಸಹ ಕಷ್ಟಕರವಾಗಲಿದೆ. ಸ್ಪರ್ಧಿಗಳು ಸಹ ನೂರಾರು ಕನಸು ಕಟ್ಟಿಕೊಂಡು ಶೋಗೆ ಹೋಗಿದ್ದಾರೆ. ಸಹಜವಾಗಿಯೇ ಅವರಿಗೆ ಶಾಕ್ ಆಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾತ್ಕಾಲಿಕವಾಗಿ ಶೋಗೆ ಹಿನ್ನೆಡೆ: ರಜತ್
ಬಿಗ್‌ಬಾಸ್ 11ರ ಸ್ಪರ್ಧಿ ರಜತ್ (Rajath) ಮಾತನಾಡಿ, ಕಾನೂನಿನ ಮೇಲೆ ನನಗೆ ಅಪಾರವಾದ ಗೌರವ ಇದೆ. ಕೆಲವು ಸಂಘಟನೆಗಳು ಯಾಕೆ ಹೀಗೆ ಮಾಡುತ್ತಿವೆ ಅನ್ನೋದು ಗೊತ್ತಾಗುತ್ತಿಲ್ಲ. ಸ್ಪರ್ಧಿಗಳು ಬಿಗ್‌ಬಾಸ್‌ಗೆ ಸಾವಿರಾರು ಕನಸುಗಳನ್ನ ಕಟ್ಟಿಕೊಂಡು ಬಂದಿರುತ್ತಾರೆ. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನೆಡೆ ಆಗಿ ಶೋ ನಿಂತಿರಬಹುದು. ಆದರೆ ಸುದೀಪ್ ಅವ್ರಿಗೆ ದೊಡ್ಡ ಶಕ್ತಿಯಿದೆ. ಮತ್ತೆ ಬಿಗ್‌ಬಾಸ್ ಪ್ರಾರಂಭವಾಗುತ್ತದೆ ಎಂದಿದ್ದಾರೆ.

ಸ್ಪರ್ಧಿಗಳ ಕನಸಿಗೆ ಬರೆ: ಬಸ್ ಕಂಡೆಕ್ಟರ್ ಆನಂದ್
ಬಿಗ್‌ಬಾಸ್ 6ರ ಸ್ಪರ್ಧಿ ಬಸ್ ಕಂಡೆಕ್ಟರ್ ಆನಂದ್ (Bus conductor Anand) ಪ್ರತಿಕ್ರಿಯಿಸಿ, ಇದು ಬಿಗ್‌ಬಾಸ್ ಮೇಲೆ ಬಂದ ಆರೋಪವಲ್ಲ. ಇದು ಕನ್ನಡ ರಿಯಾಲಿಟಿ ಶೋಗೆ ಆದ ಅವಮಾನ. ಶೋನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸ್ಪರ್ಧಿಗಳ ಕನಸುಗಳಿಗೆ ಬರೆ ಎಳೆದ ಹಾಗೆ ಆಗಿದೆ. ಜಾಲಿವುಡ್‌ನಲ್ಲಿ ಬಿಗ್‌ಬಾಸ್ ಸೆಟ್ ಹಾಕುವಾಗ ಗಮನಹರಿಸಬೇಕಿತ್ತು. ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸೂರ್ಯ ಚಂದ್ರರೂ ಇರೋದು ಎಷ್ಟು ಸತ್ಯವೋ, ಇನ್ನೆರಡು ದಿನದ ಒಳಗೆ ಬಿಗ್‌ಬಾಸ್ ಆರಂಭವಾಗೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆ ಒಳಗೆ: ರಕ್ಷಕ್ ಬುಲೆಟ್
ಬಿಗ್‌ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ (Rakshak Bullet) ಪ್ರತಿಕ್ರಿಯಿಸಿ, ಸಡನ್ನಾಗಿ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದಾಗ ಸಹಜವಾಗಿಯೇ ಅವರಿಗೆ ಬೇಜಾರಾಗಿರುತ್ತದೆ. ಇಡೀ ಮನೆ ಲಾಕ್ ಆಗಿದೆ. ಈ ಸಲ ಮಾತ್ರ ಹೀಗೆ ಆಗಿದೆ. ಬಿಗ್‌ಬಾಸ್ ಶೋಗೆ ಸ್ಪರ್ಧಿಗಳು ಕನಸು ಕಟ್ಕೊಂಡು ಬಂದಿರುತ್ತಾರೆ. ಏಕಾಏಕಿ ಶೋ ಬಂದ್ ಆದಾಗ ಭಯ ಇರುತ್ತದೆ. ಆದರೆ ಈಗ ಮತ್ತೆ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಹೋಗ್ತಿದ್ದಾರೆ ಎಂದಿದ್ದಾರೆ.

Share This Article