ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

Public TV
3 Min Read

ಮುಂಬೈ: ಮುಂಬೈ ಭದ್ರಕೋಟೆ ವಾಂಖೆಡೆ ಕ್ರೀಡ ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿದ್ದಾ ಜಿದ್ದಿ ಕಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ 10 ವರ್ಷಗಳ ಬಳಿಕ ಗೆಲುವು ಸಾಧಿಸಿದ್ದು, ಮುಂಬೈನ ಭದ್ರ ಕೋಟೆಯನ್ನ ಛಿದ್ರಗೊಳಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯವು ಕೊನೆಯವರೆಗೂ ರೋಚಕವಾಗಿತ್ತು. ಕ್ಷಣಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಲೇ ಇತ್ತು. ಅತ್ತ ಉತ್ಸಾಹ ಕಳೆದುಕೊಳ್ಳದ ಉಭಯ ತಂಡಗಳ ಅಭಿಮಾನಿಗಳು ತಮ್ಮಿಷ್ಟದ ಆಟಗಾರರನ್ನ ಊರಿದುಂಬಿಸಿ ಘೋಷಣೆ ಕೂಗುತ್ತಲೇ ಇದ್ದರು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 221 ರನ್‌ ಬಾರಿಸಿತ್ತು. 222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಕೊನೇ ಓವರ್‌ ಥ್ರಿಲ್ಲರ್‌
ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕೃನಾಲ್‌ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್‌ ಸ್ಯಾಂಟ್ನರ್‌ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲೇ ಸ್ಯಾಂಟ್ನರ್‌ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್‌ ಬಳಿ ಕ್ಯಾಚ್‌ ಕೊಟ್ಟರು. ಮರು ಎಸೆತದಲ್ಲಿ ದೀಪಕ್‌ ಚಹಾರ್‌ ಸಹ ಟಿಮ್‌ ಡೇವಿಡ್‌-ಫಿಲ್‌ ಸಾಲ್ಟ್‌ ಅವರ ಸ್ಟನ್ನಿಂಗ್‌ ಕ್ಯಾಚ್‌ಗೆ ವಿಕೆಟ್‌ ಒಪ್ಪಿಸಬೇಕಾಯಿತು. ಅಲ್ಲಿಗೆ ಮುಂಬೈ ಗೆಲುವಿನ ಆಸೆ ಕಮರಿತು. 3ನೇ ಎಸೆತದಲ್ಲಿ 1 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ನಮನ್‌ ಧೀರ್‌ ಬೌಂಡರಿ ಬಾರಿಸಿದರು. ಇನ್ನೂ 5ನೇ ಎಸೆತದಲ್ಲಿ ನಮನ್‌ ಕ್ಯಾಚ್‌ ನೀಡಿದ್ರೆ, ಕೊನೆಯ ಎಸೆತದಲ್ಲಿ ಯಾವುದೇ ರನ್‌ ಬರದ ಕಾರಣ ಆರ್‌ಸಿಬಿ 12 ರನ್‌ ಗೆಲುವು ಸಾಧಿಸಿರು.

ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಿತ್ತು. ಆದ್ರೆ ಸ್ಫೋಟಕ ಆಟವಾಡುತ್ತಿದ್ದ ತಿಲಕ್‌ ವರ್ಮಾ 18ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಬಳಿಕ 19ನೇ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ ಸಹ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಇದು ರನ್‌ ಮೇಲೆ ಪರಿಣಾಮ ಬೀರಿತು.

222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಹಾಗೂ ವಿಲ್‌ ಜಾಕ್ಸ್‌ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಸಂಕಷ್ಟ ಎದುರಾಗಿತ್ತು. 12 ಓವರ್‌ ಮುಕ್ತಾಯಗೊಂಡರೂ 100 ರನ್‌ಗಳ ಗಡಿಯೂ ದಾಟಿರಲಿಲ್ಲ. ಇದರಿಂದ ಮುಂಬೈ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಅವರ ಸ್ಫೋಟಕ ಆಟ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಜೀವ ತುಂಬಿತ್ತು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಗೆಲುವಿನ ಆಸೆ ನುಚ್ಚುನೂರಾಯ್ತು.

ಮುಂಬೈ ಪರ ಹಾರ್ದಿಕ್‌ ಪಾಂಡ್ಯ 42 ರನ್‌ (15 ಎಸೆತ, 4 ಸಿಕ್ಸರ್‌, 3 ಬೌಂಡರಿ), ತಿಲಕ್‌ ವರ್ಮಾ 56 ರನ್‌ (29 ಎಸೆತ, 4 ಸಿಕ್ಸರ್‌, 45 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್‌ ಯಾದವ್‌ 28 ರನ್‌, ವಿಲ್‌ ಜಾಕ್ಸ್‌ 22 ರನ್‌, ರೋಹಿತ್‌ ಶರ್ಮಾ, ರಿಕಲ್ಟನ್‌ ತಲಾ 17 ರನ್‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 8 ರನ್‌, ಬೋಲ್ಟ್‌ 1 ರನ್‌ ಗಳಿಸಿದರು. ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ 4 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌, ಜೋಶ್‌ ಹೇಜಲ್ವುಡ್‌ ತಲಾ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮುಂಬೈ ಬೌಲರ್‌ಗಳ ವಿರುದ್ಧ ಪರಾಕ್ರಮ ಮೆರೆಯಿತು. ಅತ್ತ ವಿಕೆಟ್‌ ಬೀಳುತ್ತಿದ್ದರೂ ಇತ್ತ ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಜಿತೇಶ್‌ ಶರ್ಮಾ ಅವರ ಬ್ಯಾಟಿಂಗ್‌ ಆರ್ಭಟ ಮುಂದುವರಿಯುತ್ತಲೇ ಸಾಗಿತು.

ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿ
ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 67 ರನ್‌ (8 ಬೌಂಡರಿ, 2 ಸಿಕ್ಸರ್‌) ಗಳಿಸಿದ್ರೆ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಜತ್‌ ಪಾಟೀದಾರ್‌ 32 ಎಸೆತಗಳಲ್ಲಿ ಸ್ಪೋಟಕ 64 ರನ್‌ (5 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಇನ್ನೂ 11 ಕೋಟಿ ಮೊತ್ತಕ್ಕೆ ಆರ್‌ಸಿಬಿ ಪಾಲಾದ ಜಿತೇಶ್‌ ಶರ್ಮಾ 19 ಎಸೆತಗಳಲ್ಲಿ ಸ್ಫೋಟಕ 40 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದೇವದತ್‌ ಪಡಿಕಲ್‌ 37 ರನ್‌, ಫಿಲ್‌ ಸಾಲ್ಟ್‌ 4 ರನ್‌, ಟಿಮ್‌ ಡೇವಿಡ್‌ 1 ರನ್‌ ಗಳಿಸಿ ಮಿಂಚಿದರು.

Share This Article