WPL 2026: ಬೌಲಿಂಗ್‌ನಲ್ಲಿ 4 ವಿಕೆಟ್‌, ಬ್ಯಾಟಿಂಗ್‌ನಲ್ಲಿ ಫಿಫ್ಟಿ- ಡಿ ಕ್ಲರ್ಕ್‌ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ – RCB ಶುಭಾರಂಭ

0 Min Read

– ತವರಲ್ಲಿ ಮುಂಬೈಗೆ ಮುಖಭಂಗ

ನವಿ ಮುಂಬೈ: ನಾಡಿನ್ ಡಿ ಕ್ಲರ್ಕ್ ಆಲ್‌ರೌಂಡ್‌ ಆಟದ ನೆರವಿನಿಂದ ಮುಂಬೈ ವಿರುದ್ಧ ಆರ್‌ಸಿಬಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಆ ಮೂಲಕ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯ ಗೆದ್ದು ಆರ್‌ಸಿಬಿ ಶುಭಾರಂಭ ಮಾಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿದರು. ಗುರಿ ಬೆನ್ನಟ್ಟಿದ ಆರ್‌ಸಿಬಿ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಉತ್ತಮ ಆರಂಭ ಪಡೆದ ಆರ್‌ಸಿಬಿ ಮೂರನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಗ್ರೇಸ್ ಹ್ಯಾರಿಸ್ 25, ಕ್ಯಾಪ್ಟನ್‌ ಸ್ಮೃತಿ ಮಂಧಾನಾ 18 ರನ್‌ ಗಳಿಸಿ ಔಟಾದರು. ನಂತರ ಬಂದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 65 ರನ್‌ ಇರುವಾಗಲೇ 5 ವಿಕೆಟ್‌ಗಳು ಬಿದ್ದಿದ್ದವು.

ಗೆಲುವು ಕಷ್ಟ ಎನ್ನುವಂತಿದ್ದ ಮ್ಯಾಚ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿ ಗೆಲುವಿನ ಭರವಸೆ ಮೂಡಿಸಿದರು. 44 ಬಾಲ್‌ಗೆ 63 ರನ್‌ ಗಳಿಸಿ (7 ಫೋರ್‌, 2 ಸಿಕ್ಸರ್‌) ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆ ಓವರ್‌ನಲ್ಲಿ ಸಿಕ್ಸರ್‌, ಫೋರ್‌ಗಳ ಮೂಲಕ ಆರ್‌ಸಿಬಿ ಗೆಲ್ಲಿಸಿದರು. ಡಿ ಕ್ಲರ್ಕ್‌ಗೆ ಅರುಂಧತಿ ರೆಡ್ಡಿ ಸಾಥ್‌ (20) ನೀಡಿದರು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ತಂಡ 6 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿತ್ತು. ತಂಡದ ಪರ ಸಜೀವನ್ ಸಜನಾ 45, ನಿಕೋಲಾ ಕ್ಯಾರಿ 40, ಗುಣಲನ್ ಕಮಲಿನಿ 32, ಹರ್ಮನ್‌ಪ್ರೀತ್‌ ಕೌರ್‌ 20 ರನ್‌ ಗಳಿಸಿದರು.

ಇಂದಿನ ರಣರೋಚಕ ಪಂದ್ಯದಲ್ಲಿ ನಾಡಿನ್ ಡಿ ಕ್ಲರ್ಕ್ ಬೌಲಿಂಗ್‌ನಲ್ಲೂ ಪಾರಮ್ಯ ಮೆರೆದರು. ಆರ್‌ಸಿಬಿ ಪರ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಇವರ ಆಲ್‌ರೌಂಡ್‌ ಆಟದಿಂದ ಆರ್‌ಸಿಬಿ ಗೆದ್ದು ಬೀಗಿತು.

Share This Article