ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

Public TV
1 Min Read

ಬೆಂಗಳೂರು:‌ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಆರಂಭಿಕ ಆಟ ಇಂದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಹೌದು. ಡೆಲ್ಲಿ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (Phil Salt) 3ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ಗೆ (Mitchell Starc) 30 ರನ್‌ ಚಚ್ಚಿದರು. ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ ಸಾಲ್ಟ್‌, ಬಳಿಕ 4, 4, ನೋಬಾಲ್‌+4, 6, 1LB, 4LB ಬಾರಿಸುವ ಮೂಲಕ ಒಂದೇ ಓವರ್‌ನಲ್ಲಿ 30 ರನ್‌ ಬಾರಿಸಿದ್ರು, ಫಿಲ್‌ ಸಾಲ್ಟ್‌ ಅವರ ಈ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ.

ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ. ಆರ್‌ಸಿಬಿ… ಆರ್‌ಸಿಬಿ ಎಂದು ಕೂಗುತ್ತಾ ಆಟಗಾರರನ್ನು ಹುರಿದುಂಬಿಸುತ್ತಾರೆ. ಅದೇ ರೀತಿ ಫ್ಯಾನ್ಸ್‌ ಫಿಲ್‌ ಸಾಲ್ಟ್‌ ಅವರನ್ನು ಹುರಿದುಂಬಿಸುತ್ತಿದ್ದರು. ಆದ್ರೆ 4ನೇ ಓವರ್‌ನ 5ನೇ ಎಸೆತದಲ್ಲಿ ಅನಗತ್ಯ ರನ್‌ ಕದಿಯಲು ಯತ್ನಿಸಿ ಸಾಲ್ಟ್‌ ರನೌಟ್‌ಗೆ ತುತ್ತಾದರು.

Share This Article