ತವರಲ್ಲಿ ಅಬ್ಬರಿಸಿ ಬೊಬ್ಬಿರಿದ RCB – ಚೆನ್ನೈ ವಿರುದ್ಧ 43 ರನ್‌ಗಳ ಭರ್ಜರಿ ಜಯ – ಪಾಯಿಂಟ್‌ ಪಟ್ಟಿಯಲ್ಲಿ ನಂ.1

0 Min Read

– ಬ್ಯಾಟಿಂಗ್‌ನಲ್ಲಿ ಮಿಂಚಿದ ಡೇವಿಡ್‌, ಪಡಿಕ್ಕಲ್‌, ಸಾಲ್ಟ್‌, ಪಾಟೀದರ್‌

ಬೆಂಗಳೂರು: ಡೇವಿಡ್‌, ಪಡಿಕ್ಕಲ್‌, ಸಾಲ್ಟ್‌, ಪಾಟೀದರ್‌ ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ನೆರವಿನಿಂದ ತವರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 43 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ತವರಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಆರ್‌ಸಿಬಿ ಪಾಯಿಂಟ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಫೋರ್‌, ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಆರ್‌ಸಿಬಿ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 250 ರನ್‌ಗಳಿಸಿತು. ದಾಖಲೆ ಮೊತ್ತದ ಗುರಿ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಅಂದು ಪಂತ್‌ಗೆ ಕ್ಲಾಸ್‌ – ಇಂದು ಬಲವಾಗಿ ಅಪ್ಪಿ ಸಂಭ್ರಮಿಸಿದ ಗೋಯೆಂಕಾ

ಆರ್‌ಸಿಬಿ ನೀಡಿದ 251 ರನ್‌ಗಳ ದಾಖಲೆ ಗುರಿ ಬೆನ್ನತ್ತಿದ ಸಿಎಸ್‌ಕೆ ಆರಂಭಿಕ ಆಘಾತ ಅನುಭವಿಸಿತು. ಕೇವಲ 30 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಂಜು ಸ್ಯಾಮ್ಸನ್‌ 9, ರುತುರಾಜ್‌ ಗಾಯಕ್ವಾಡ್‌ 7, ಆಯುಷ್‌ ಮ್ಹಾತ್ರೆ ಕೇವಲ 1 ರನ್‌ಗೆ ಪೆವಿಲಿಯನ್‌ ಸೇರಿ ನಿರಾಸೆ ಮೂಡಿಸಿದರು.

ಈ ವೇಳೆ ಸರ್ಫರಾಜ್‌ ಖಾನ್‌ ಅರ್ಧಶತಕದ (25 ಬಾಲ್‌, 8 ಫೋರ್‌, 2 ಸಿಕ್ಸರ್) ಜವಾಬ್ದಾರಿಯುತ ಆಟವಾಡಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್‌ ಔಟ್‌ ಆಗಿ ಗೆಲುವಿನ ಆಸೆ ಕಮರುವಂತೆ ಮಾಡಿದರು.‌ ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕ್‌ ಶರ್ಮಾ 8, ಶಿವಂ ದುಬೆ 18 ರನ್‌ ಅಷ್ಟೇ ಗಳಿಸಿ ಹೊರನಡೆದರು.

ಪ್ರಶಾಂತ್‌ ವೀರ್‌ 43, ಜೇಮೀ ಓವರ್ಟನ್ 37, ಅನ್ಶುಲ್ ಕಾಂಬೋಜ್ 19 ರನ್‌ಗಳ ಕೊಡುಗೆ ನೀಡಿ ತಂಡವು 200 ರನ್‌ ಗಡಿ ದಾಟುವಲ್ಲಿ ನೆರವಾದರು. ಆರ್‌ಸಿಬಿ ಪರ ಸಂಘಟಿತ ಬೌಲಿಂಗ್‌ ಪ್ರದರ್ಶನ ಕಂಡುಬಂತು. ಭುವನೇಶ್ವರ್‌ 3, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್, ಕೃಣಾಲ್‌ ಪಾಂಡ್ಯ ತಲಾ 2 ವಿಕೆಟ್‌ ಪಡೆದರು. ಸುಯೇಶ್‌ ಶರ್ಮಾ 1 ವಿಕೆಟ್‌ ಪಡೆದರು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಸ್ಫೋಟಕ ಪ್ರದರ್ಶನ ನೀಡಿತು. ಫಿಲ್‌ ಸಾಲ್ಟ್‌ (46 ರನ್‌, 30 ಬಾಲ್‌, 3 ಫೋರ್‌, 2 ಸಿಕ್ಸರ್) ಮತ್ತು ವಿರಾಟ್‌ ಕೊಹ್ಲಿ‌ (28 ರನ್) ತಂಡಕ್ಕೆ ಉತ್ತಮ ಆರಂಭ ನೀಡಿದರು.‌ ದೇವದತ್‌ ಪಡಿಕ್ಕಲ್‌ ಅಬ್ಬರದ ಅರ್ಧಶತಕ ಸಿಡಿಸಿ ಗಮನ ಸೆಳೆದರು. 29 ಬಾಲ್‌ಗೆ 5 ಫೋರ್‌ ಮತ್ತು 2 ಸಿಕ್ಸರ್‌ನೊಂದಿಗೆ 50 ರನ್‌ ಗಳಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಎದುರಾಳಿ ತಂಡದ ವಿರುದ್ಧ ತನ್ನದೇ ದಾಖಲೆ ಉಡೀಸ್‌ ಮಾಡಿದ ಕೊಹ್ಲಿ

ನಂತರ ರಜತ್‌ ಪಾಟೀದಾರ್‌ ಔಟಾಗದೇ 19 ಬಾಲ್‌ಗೆ 48 ರನ್‌ (1 ಫೋರ್‌, 6 ಸಿಕ್ಸರ್‌) ಕಲೆಹಾಕಿ ಅರ್ಧಶತಕ ವಂಚಿತರಾದರು. ಟಿಮ್‌ ಡೇವಿಡ್‌ ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದರು. ಕೇವಲ 25 ಬಾಲ್‌ಗೆ 3 ಫೋರ್‌ ಮತ್ತು 8 ಸಿಕ್ಸರ್‌ನೊಂದಿಗೆ 70 ರನ್‌ ಚಚ್ಚಿದರು.

Share This Article