`ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB

Public TV
2 Min Read

ಬೆಂಗಳೂರು: ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ಆರ್‌ಸಿಬಿ (RCB) ತನ್ನ 7ನೇ ಪಂದ್ಯದಲ್ಲಿ ರಾಜಸ್ಥಾನ್ (Rajasthan Royals) ರಾಯಲ್ಸ್ ವಿರುದ್ಧ ತವರಿನಲ್ಲಿ ಸೆಣಸಲಿದೆ.

ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2011ರ ಐಪಿಎಲ್​ನಿಂದ ಆರ್​ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್​ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ (IPL 2023) ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

16ನೇ ಆವೃತ್ತಿಯಲ್ಲಿ 7ನೇ ಪಂದ್ಯವಾಡುತ್ತಿರುವ ಆರ್‌ಸಿಬಿ ತವರಿನಲ್ಲೇ ಪಿಂಕ್ ಆರ್ಮಿ ವಿರುದ್ಧ ಹಸಿರು ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿ ಹಿಡಿದಿದೆ. ʻನಮ್ಮ ಹಸಿರು ಭೂಮಿಗಾಗಿʼ ಎಂಬ ಸಂಕಲ್ಪದೊಂದಿಗೆ ʻವಿಶೇಷ ಪಂದ್ಯಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ, ನಮ್ಮ ಪರಿಸರಕ್ಕಾಗಿ ಪ್ರತಿಜ್ಞೆ ತೆಗೆದುಕೊಳ್ಳೋಣʼ, ʻಮುಂದಿನ ಪೀಳಿಗೆಗಾಗಿ ಹಸಿರು ಪರಿಸರ ಉಳಿಸೋಣʼ ಎಂದು ಅಭಿಮಾನಿಗಳಿಗೆ ಕರೆ ನೀಡಿದೆ.

ಈಗಾಗಲೇ 6 ಪಂದ್ಯಗಳನ್ನಾಡಿರುವ ಆರ್‌ಸಿಬಿ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 6ನೇ ಸ್ಥಾನದಲ್ಲಿದೆ. ಭಾನುವಾರ ಪಿಂಕ್‌ ಆರ್ಮಿ ವಿರುದ್ಧ ಗೆದ್ದರೆ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಲಿದೆ. ಇದನ್ನೂ ಓದಿ: 7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

ಗೆಲುವಿಗಿಂತ ಸೋಲೆ ಹೆಚ್ಚು: 2011ರ ಆವೃತ್ತಿಯಿಂದ ಆರ್‌ಸಿಬಿ ಋತುವಿನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಆಡಲು ಆರಂಭಿಸಿತು. 2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರ ಆವೃತ್ತಿಯಲ್ಲಿ ಫಲಿತಾಂಶ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Share This Article