ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

Public TV
2 Min Read

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಪ್ ಗೆಲ್ಲುವುದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತಂದಿದೆ.

ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್, ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿ ನೂತನ ಮುಖ್ಯ ಕೋಚ್ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದಾರೆ. ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್‍ರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸದ್ಯ ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಸೈಮನ್ ಕ್ಯಾಟಿಚ್ ಅವರು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ಆಗಿದ್ದರು. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಆಶಿಶ್ ನೆಹ್ರಾ ಹಾಗೂ ಕರ್ಸ್ಟನ್ ಅವರು 2011ರ ವಿಶ್ವಕಪ್ ವಿಜೇತ ಭಾರತೀಯ ತಂಡದೊಂದಿಗೆ ಗುರುತಿಸಿಕೊಂಡಿದ್ದರು. ಆಗ ನೆಹ್ರಾ ತಂಡದಲ್ಲಿ ಬೌಲರ್ ಮತ್ತು ಕರ್ಸ್ಟನ್ ಭಾರತದ ತಂಡದ ಮುಖ್ಯ ಕೋಚ್ ಆಗಿದ್ದರು. ಹೀಗಾಗಿ ಈ ಜೋಡಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಐಪಿಎಲ್ 12 ಆವೃತ್ತಿಗಳಲ್ಲಿ ಯಾವುದರಲ್ಲಿಯೂ ಆರ್‌ಸಿಬಿ ಗೆಲುವು ಸಾಧಿಸಿಲ್ಲ. ಹೀಗಾಗಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತರಲಾಗಿದೆ ಎಂದು ವರದಿಯಾಗಿದೆ.

2018ರಲ್ಲಿ ನ್ಯೂಜಿಲೆಂಡ್‍ನ ಡೇನಿಯಲ್ ವೆಟೋರಿ ಬದಲಿಗೆ ಗ್ಯಾರಿ ಕರ್ಸ್ಟನ್ ಅವರಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಅವರ ತರಬೇತಿ ಅಡಿ ತಂಡದ ಸಾಧನೆ ನಿರಾಶಾದಾಯಕವಾಗಿತ್ತು. 2016ರಲ್ಲಿ ಫೈನಲ್‍ಗೆ ತಲುಪಿತ್ತು. ಆ ಬಳಿಕ ನಡೆದ 2018ರ ಹಾಗೂ 2019ರ ಆವೃತ್ತಿಯಲ್ಲಿ ಕ್ರಮವಾಗಿ ಆರು, ಎಂಟನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರಿಗೆ ಇದುವರೆಗೂ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ಯಾಟಿಚ್ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೆಸ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತರಬೇತುದಾರರಾಗಿದ್ದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಸಿಬಿ ತಂಡದ ಅಧ್ಯಕ್ಷ ಸಂಜೀವ್ ಚುರಿವಾಲಾ, ಬೆಂಗಳೂರು ತಂಡವು ವಿಶ್ವಾಸಾರ್ಹ, ಗೌರವಾನ್ವಿತ ಮತ್ತು ಅತ್ಯುತ್ತಮ ಟಿ-20 ಫ್ರ್ಯಾಂಚೈಸ್ ಆಗಿದೆ. ಹೆಸ್ಸನ್ ಮತ್ತು ಕ್ಯಾಟಿಚ್ ಇಬ್ಬರೂ ನಮ್ಮನ್ನು ವಿಜೇತ ತಂಡವನ್ನಾಗಿ ಮಾಡಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಕ್ಯಾಟಿಚ್ ಅವರ ಅನುಭವ ಮತ್ತು ಬಲವಾದ ತಂಡಗಳನ್ನು ನಿರ್ಮಿಸಿದ ಹೆಸ್ಸನ್ ಅವರ ಅನುಭವವು ನಮ್ಮನ್ನು ಗೆಲ್ಲುವ ತಂಡವನ್ನಾಗಿ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೆಲ್ಲದ ತಂಡಗಳು:
ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‍ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *